ಸಿಂಧೂರಿಯನ್ನು ಭೂ ಅಕ್ರಮದ ವಿಶೇಷ ತನಿಖಾಧಿಕಾರಿಯಾಗಿ ನೇಮಿಸಿ: ಹೆಚ್.ವಿಶ್ವನಾಥ್

ಮೈಸೂರು, ಜೂ.10: ತಮ್ಮ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಮೈಸೂರಿನಲ್ಲಿ ನಡೆದಿರುವ ಭೂ ಅಕ್ರಮದ ಬಗ್ಗೆ ಮಾಡಿರುವ ಆದೇಶಗಳ ತುರ್ತು ನಿಗದಿತ ಸಮಯದಲ್ಲಿ ಜಾರಿ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಮನವಿ ನೀಡಿ ಒತ್ತಾಯಿಸಿದರು.
ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನೂತನ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವನರನ ಭೇಟಿ ಮಾಡಿದ ಎಂಎಲ್‍ಸಿ ಎಚ್.ವಿಶ್ವನಾಥ್, ಜಿಲ್ಲಾಧಿಕಾರಿ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಮೈಸೂರು ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯವರು ಮೈಸೂರು ನಗರದ ಆಸುಪಾಸು ಹೊಂದಿಕೊಂಡಂತೆ ನಡೆದಿರುವ ಭೂ ಅಕ್ರಮಗಳನ್ನು ಕಡತಗಳ ಸಮೇತ ಖುದ್ದು ಪರಿಶೀಲಿಸಿ ನಾಲ್ಕು ಆದೇಶಗಳನ್ನು ಮಾಡಿರುತ್ತಾರೆ.
ಬೆಂಗಳೂರಿನಲ್ಲಿ ನಾಳೆ ಸಿಎಂ, ಸಿಎಸ್ ಭೇಟಿ ಮಾಡಿ ಮೈಸೂರು ಸುತ್ತಮುತ್ತ ನಡೆದಿದೆ ಎನ್ನಲಾಗುತ್ತಿರುವ ಭೂ ಹಗರಣದ ತನಿಖೆಗೆ ರೋಹಿಣಿ ಸಿಂಧೂರಿಯನ್ನು ವಿಶೇಷಾಧಿಕಾರಿಯಾಗಿ ನೇಮಿಸಲು ಮನವಿ ಮಾಡುತ್ತೇನೆ ಎಂದು ಎಚ್. ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಭೂ ಅತಿಕ್ರಮ, ಭೂಗಳ್ಳ ದಂದೆ ಇತ್ತೀಚೆಗೆ ನಿರಂತರವಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಮತ್ತು ಆರ್ ಟಿ ಐ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ದಾಖಲೆ ಪತ್ರಗಳ ಸಮೇತ ಲಿಖಿತ ದೂರನ್ನು ಸಲ್ಲಿಸಿದ್ದಾರೆ. ಇಂತಹ ಪ್ರಮುಖ ದೂರುಗಳನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕಡತಗಳನ್ನು ತೀವ್ರವಾಗಿ ಪರಿಶೀಲಿಸಿ ಭೂಗಳ್ಳರಿಂದ ಆಗಿರುವ ಭೂ ಅಕ್ರಮಗಳ ಬಗ್ಗೆ ನಾಲ್ಕು ವಿವಿಧ ಗಂಭೀರ ಆದೇಶಗಳನ್ನು ಮಾಡಿರುತ್ತಾರೆ ಮತ್ತು ಹಗರಣಗಳನ್ನು ಸರ್ಕಾರದ ಗಮನಕ್ಕೆ ತಂದಿರುತ್ತಾರೆ.
ಮೈಸೂರು ನಗರದ ಸೌಂದರ್ಯ ಮತ್ತು ಅಭಿವೃದ್ಧಿಯ ಬಗ್ಗೆ ಮತ್ತು ವಸತಿಹೀನರ ಸೂರಿನ ಬಗ್ಗೆ ಕಳಕಳಿ ಹೊಂದಿದ ಓರ್ವ ಪ್ರಜೆಯಾಗಿ ಜಿಲ್ಲಾಧಿಕಾರಿಗಳು ಭೂ ಅಕ್ರಮದ ಬಗ್ಗೆ ಮಾಡಿರುವ ಆದೇಶಗಳನ್ನು ತುರ್ತು ನಿಗದಿತ ಸಮಯದೊಳಗೆ ಕ್ರಮವಹಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಜಕಾಲುವೆ ಮೇಲೆ ಕಲ್ಯಾಣ ಮಂಟಪ ನಿರ್ಮಾಣ ಆಗಿದೆ. ಒಂದು ಗುಂಟೆ ಅಲ್ಲ ಸಾವಿರಾರು ಎಕರೆ ಹೋಗಿದೆ. ಎಲ್ಲಾ ಜನಪ್ರತಿನಿಧಿಗಳು ಒಟ್ಟಾಗಿ ಸೇರಿ ಕೊರೊನಾ ಓಡಿಸುವ ಬದಲು ಅಧಿಕಾರಿ ಓಡಿಸಿದರು. ರೋಹಿಣಿ ಸಿಂಧೂರಿ ಶಿಲ್ಪಾನಾಗ್ ಒಳ್ಳೆಯ ಅಧಿಕಾರಿ. ಇಬ್ಬರು ಐಎಎಸ್ ಅಧಿಕಾರಿಗಳನ್ನು ಹೊರ ಹಾಕಿದ್ದು ರಾಜಕಾರಣಿಗಳ ಸ್ವಾರ್ಥ ಎಂದು ಹೆಚ್. ವಿಶ್ವನಾಥ್ ಕಿಡಿಕಾರಿದರು. ನಾನು ಸಾ.ರಾ ಮಹೇಶ್ ಅವರ ಪ್ರತಿಭಟನೆಯನ್ನು ಸ್ವಾಗತಿಸುತ್ತೇನೆ. ಸಾ ರಾ ಕಲ್ಯಾಣಮಂಟಪದ ಬಗ್ಗೆ ದಾಖಲೆ ಕೊಡಲಿ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.