ವಿಜಯಪುರ:ಜು.22: ಸಿಂದಗಿಯಲ್ಲಿ ಕಳೆದ 2017ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾದ ಜುಮಣ್ಣ ಶರಣಪ್ಪ ಏಳೂರೆ ಹಾಗೂ ರೇವಣಪ್ಪ ಶರಣಪ್ಪ ಏಳೂರೆಯನ್ನು ಜೀವಾವಧಿ ಶಿಕ್ಷೆ ಹಾಗೂ 1.60 ಲಕ್ಷ ರೂ. ದಂಡ ವಿಧಿಸಿ ವಿಜಯಪುರ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವಾಜಿ ಅನಂತ ನಾಲವಾಡೆ ಅವರು ಅಭಿಯೋಗದ ಪರ ಹಾಜರ್‍ಪಡಿಸಲಾದ ಸಾಕ್ಷಿ ಪುರಾವೆಗಳನ್ನು ಅವಲೋಕಿಸಿ ಅಭಿಯೋಗವು, ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದ ಆರೋಪಿತರಾದ ಜುಮಣ್ಣ ಶರಣಪ್ಪ ಏಳೂರೆ ಹಾಗೂ ರೇವಣಪ್ಪ ಶರಣಪ್ಪ ಏಳೂರೆ ಅವರ ಮೇಲಿನ ಆಪಾದನೆ ರುಜುವಾತಾದ ಹಿನ್ನಲೆಯಲ್ಲಿ ಆರೋಪಿತರಿಗೆ ಕಲಂ 302 ಐಪಿಸಿ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ತಲಾ 80 ಸಾವಿರ ರೂ. ದಂಡ ಕಲಂ : 324 ಐಪಿಸಿ ಅಪರಾಧಕ್ಕೆ 1 ವರ್ಷ ಜೈಲು ಶಿಕ್ಷೆ, ಕಲಂ 504 ಐಪಿಸಿ ಅಪರಾಧಕ್ಕೆ 4 ತಿಂಗಳು ಶಿಕ್ಷೆ, ಕಲಂ 506 ಐಪಿಸಿ ಅಪರಾಧಕ್ಕೆ 4 ತಿಂಗಳು ಜೈಲು ಶಿಕ್ಷೆ ವಿಧಿಸಿ ದಿನಾಂಕ : 19-07-2023 ರಂದು ತೀರ್ಪು ನೀಡಿದ್ದಾರೆ.
ಪ್ರಕರಣದ ತನಿಖೆಯನ್ನು ಶಂಕರಗೌಡ ಎಮ್.ನ್ಯಾಮಣ್ಣವರ ಮಾಡಿ ಅಪಾದನಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅಭಿಯೋಗದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕರಾದ ಎಸ್.ಎಚ್.ಹಕೀಂ ವಾದ ಮಂಡಿಸಿದ್ದರು ಎಂದು ಪ್ರಧಾನ ಸರ್ಕಾರಿ ಅಭಿಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.