ಸಿಂದಗಿ – ಕೊಡಂಗಲ್ ಹೆದ್ದಾರಿಗೆ ಅನುಮೋದನೆ ಶಹಾಪುರ ನಗರಕ್ಕೆ ಮತ್ತೊಂದು ಬೈಪಾಸ್ ದರ್ಶನಾಪುರ

ಶಹಾಪುರ: ಜ.18:ನಗರದ ಬೈಪಾಸ್ ರಸ್ತೆಯ ಮೂಲಕ ಹಾಯ್ದು ಹೋಗುವ ಸಿಂದಗಿ-ಕೊಡಂಗಲ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅನುಮೋದನೆ ನೀಡಿದ್ದು, ಇದರಿಂದ ನಗರದ ಜನತೆಗೆ ಮತ್ತೊಂದು ಬೈಪಾಸ್ ರಸ್ತೆ ಲಭ್ಯವಾಗಲಿದೆ. ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ಈ ಕುರಿತು ಹೇಳಿಕೆ ನೀಡಿರುವ ಅವರು ಹಲವಾರು ದಿನಗಳಿಂದ ಸಿಂದಗಿ ಕೊಡಂಗಲ್ ರಾಜ್ಯ ಹೆದ್ದಾರಿ ನಿರ್ಮಿಸಲು ಸರಕಾರ ಯೋಜನೆ ರೂಪಿಸಿತ್ತು. ಸಧ್ಯ ಇದನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾರ್ಪಡಿಸಲಾಗುತ್ತಿದೆ. ನೂತನವಾಗಿ ಆರಂಭವಾಗಲಿರುವ ರಸ್ತೆಯು ಸಿಂದಗಿ, ಗೊಲಗೇರಿ, ಭೀಮರಾಯನಗುಡಿ, ಶಹಾಮರ ಹೊರವಲಯದಿಂದ, ಯಾದಗಿರಿ, ಗುರುಮಿಠಕಲ್, ಯನಾಗುಂದಿ, ಮೇದಕ, ಕೊಡಂಗಲ್ ಸೇರಲಿದೆ. ಈ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ರಾಜ್ಯ ಸರಕಾರವು ಕೇಂದ್ರ ಸರಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ಹೆದ್ದಾರಿಗೆ ಒಪ್ಪಿಗೆ ನೀಡಲಾಗಿತ್ತು. ವೆಚ್ಚದ ಅಂದಾಜು ಪಟ್ಟಿ ಸಿದ್ಧವಾಗಲಿದ್ದು ಆದಷ್ಟು ಬೇಗನೆ ಡಿಪಿಆರ್ ಕಾರ್ಯ ಮುಗಿಸಿದ ನಂತರ ಭೂಸ್ವಾಧಿನ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದರು.

ಈ ಹೆದ್ದಾರಿ ರಸ್ತೆ ನಿರ್ಮಿಸುವುದರಿಂದ ಯಾದಗಿ- ರಿಯಿಂದ ಅಥವಾ ಸಿಂದಗಿಯಿಂದ ಹೈದ್ರಾಬಾದ್‍ನತ್ತ ತೆರಳುವ ಭಾರಿ ವಾಹನಗಳು ಸೇರಿದಂತೆ ಇನ್ನಿತರ ವಾಹನಗಳು ನಗರ ಪ್ರವೇಶಿಸದೇ ಹುಲಕಲ್ ಗ್ರಾಮದ ಹತ್ತಿರದಲ್ಲಿ ಬೈಪಾಸ್ ಮೂಲಕ ಹಾಯ್ದ ಹೋಗುತ್ತವೆ. ಇದರಿಂದಾಗಿ ನಗರದಲ್ಲಿ ಸಂಚಾರ ಸುಗಮಗೊಳ್ಳಲಿದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.