ಸಿಂಗಾಪುರದಲ್ಲಿ ರಾಜಪಕ್ಸೆ ನಾಳೆ ಶ್ರೀಲಂಕಾ ಸಂಸತ್ ಸಮಾವೇಶ

ಕೊಲಂಬೋ, ಜು. ೧೪- ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಜನರ ಆಕ್ರೋಶಕ್ಕೆ ಬೆಚ್ಚಿ ಬಿದ್ದು ಮಾಲ್ಡೀವ್ಸ್‌ಗೆ ಪರಾರಿಯಾದ ನಂತರ ಅಧ್ಯಕ್ಷ ಗೊಟಬಯ ರಾಜಪಕ್ಸ ಇಂದು ಸಿಂಗಾಪುರಕ್ಕೆ ತೆರಳಿದ್ದಾರೆ. ಆದರೆ, ಅಧ್ಯಕ್ಷ ಸ್ಥಾನಕ್ಕೆ ಇನ್ನು ರಾಜೀನಾಮೆ ನೀಡಲು ಮೀನ-ಮೇಷ ಎಣಿಸುತ್ತಿದ್ದಾರೆ.
ಮತ್ತೊಂದೆಡೆ ರಾಜಧಾನಿ ಕೊಲಂಬೊದಲ್ಲಿ ಕರ್ಫ್ಯೂ ಮುಂದುವರೆದಿದ್ದು, ಅಧ್ಯಕ್ಷರ ನಿವಾಸ ಸೇರಿದಂತೆ ಪ್ರಮುಖ ಸರ್ಕಾರಿ ಕಟ್ಟಡದಲ್ಲಿ ಠಿಕಾಣಿ ಹೂಡಿದ್ದ ಪ್ರತಿಭಟನಾಕಾರರು ಸರ್ಕಾರಿ ಕಟ್ಟಡಗಳನ್ನು ತೆರವುಗೊಳಿಸಲು ತೀರ್ಮಾನಿಸಿದ್ದಾರೆ.
ಸರ್ಕಾರಿ ಅಧಿಕಾರಿಗಳು ಹಾಗೂ ಪ್ರತಿಭಟನಾಕಾರರ ಜತೆ ನಡೆಸಿದ ಮಾತುಕತೆ ಸಫಲವಾಗಿದ್ದು, ಸರ್ಕಾರಿ ಕಟ್ಟಡಗಳನ್ನು ತೊರೆಯಲು ಮುಂದಾಗಿದ್ದಾರೆ.
ಈ ಮಧ್ಯೆ ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ನಾಳೆ ಶ್ರೀಲಂಕಾ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಯಾರಿಗೆ ಅಧ್ಯಕ್ಷ ಪಟ್ಟ ಲಭಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.ಮಾಲ್ಡೀವ್ಸ್‌ನಿಂದ ಸಿಂಗಾಪುರಕ್ಕೆ ತೆರಳಿದ ಬಳಿಕ ರಾಜೀನಾಮೆ ನೀಡುವ ನರೀಕ್ಞೆ ಇದೆ.
ಗೊಟಬಯ ರಾಜಪಕ್ಸ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಪತ್ರ ತಮ್ಮ ಕೈಸೇರಿಲ್ಲ ಎಂದು ಶ್ರೀಲಂಕಾ ಸಂಸತ್ತಿನ ಸ್ಪೀಕರ್ ದೃಢಪಡಿಸಿದ್ದಾರೆ.
ನಿನ್ನೆಯೇ ರಾಜೀನಾಮೆ ನೀಡುವುದಾಗಿ ಗೊಟಬಯ ಘೋಷಿಸಿದ್ದರು. ಆದರೆ ಇದುವರೆಗೂ ಪದತ್ಯಾಗ ಮಾಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಶ್ರೀಲಂಕಾದ ಪಶ್ಚಿಮ ಭಾಗದಲ್ಲಿ ವಿಧಿಸಲಾಗಿದ್ದ ಕರ್ಫ್ಯೂ ತೆರವುಗೊಳಿಸಲಾಗಿದೆ.
ಗೊಟಬಯ ದೇಶದಿಂದ ಪರಾರಿಯಾಗುವ ರನಿಲ್ ವಿಕ್ರಂ ಸಿಂಘೆ ಅವರನ್ನು ಪ್ರಭಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ರಾಜೀನಾಮೆಗೆ ವ್ಯಾಪಕ ಒತ್ತಡಗಳ ನಡುವೆಯೂ ಪ್ರಧಾನಿ ಹುದ್ದೆಗೆ ಸಮರ್ಥ ವ್ಯಕ್ತಿಯೆಂದು ನೇಮಕ ಮಾಡುವಂತೆ ಸ್ಪೀಕರ್ ಮಹಿಂದ ಯಪಾ ಅಭೆವರ್ಧನ ಅವರಿಗೆ ಪ್ರಧಾನಿ ರನಿಲ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಗೊಟಬಯ ಹಾಗೂ ಪ್ರಧಾನಿ ರಾಜೀನಾಮೆಗೆ ಆಗ್ರಹಿಸಿ, ಜನರು ಬೀದಿಗಿಳಿದು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜಪಕ್ಸ ದೇಶದಿಂದ ಪರಾರಿಯಾದ ನಂತರ ನಿನ್ನೆ ನಡೆದ ವ್ಯಾಪಕ ಹಿಂಸಾಚಾರದಲ್ಲಿ ೮೪ ಮಂದಿ ಗಾಯಗೊಂಡಿದ್ದಾರೆ.
ಪ್ರಸ್ತುತ ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದು ಪ್ರತಿಭಟನಾಕಾರರ ಮೇಲೆ ಯಾವುದೇ ಬಲಪ್ರಯೋಗ ಮಾಡಬಾರದು ಎಂದು ಸೂಚನೆ ನೀಡಲಾಗಿದೆ.
ಇದೇ ವೇಳೆ ದೇಶದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯನ್ನು ಕೊನೆಗಾಣಿಸಲು ಪ್ರಧಾನಿ ರನಿಲ್ ವಿಕ್ರಂ ಸಿಂಘೆ ಎಲ್ಲ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಚರ್ಚೆ ನಡೆಸಿ, ಪ್ರಸ್ತುತ ಉಂಟಾಗಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಂಡಲು ಮುಂದಾಗಿದ್ದಾರೆ.