ಸಿಂಗಟಾಲೂರು ಬ್ಯಾರೇಜ್‍ಗೆ ಬಾಗಿನ ಅರ್ಪಿಸಿದ ಮಠಾಧೀಶರು


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಜು.28: ಸಮೀಪದ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‍ಗೆ ವಿವಿಧ ಮಠಾಧೀಶರು ಗುರುವಾರ ಬಾಗಿನ ಸಮರ್ಪಿಸಲಾಯಿತು.
ಮಠಾಧೀಶರ ಧರ್ಮ ಪರಿಷತ್‍ನ ಮಠಾಧೀಶರು ಗಂಗಾ ಪೂಜೆ ನೆರವೇರಿಸಿ ಬಳಿಕ ತುಂಗಭದ್ರೆಗೆ ಬಾಗಿನ ಅರ್ಪಿಸಿದರು.
ನಂದಿಪುರ ಪುಣ್ಯ ಕ್ಷೇತ್ರದ ಮಹೇಶ್ವರ ಸ್ವಾಮೀಜಿ ಮಾತನಾಡಿ, ಸಿಂಗಟಾಲೂರು ಯೋಜನೆಯ ಎಡ, ಬಲ ದಂಡೆಯ ಜಮೀನುಗಳಿಗೆ ನೀರು ಹಂಚಿಕೆಯಲ್ಲಿ ತಾರತಮ್ಯ ಮಾಡಿರುವುದು ಸರಿಯಲ್ಲ. ಈ ಯೋಜನೆಯಿಂದ ಎಡ ದಂಡೆಯ ಮುಂಡರಗಿ, ಗದಗ, ಕೊಪ್ಪಳ, ಯಲಬುರ್ಗ ತಾಲೂಕಿನ ಎರಡು ಲಕ್ಷ ಎಕರೆ ನೀರಾವರಿ ಸೌಲಭ್ಯ ಪಡೆದರೆ, ಬಲ ದಂಡೆಯಲ್ಲಿ ಹಡಗಲಿ ತಾಲೂಕಿನ 36 ಸಾವಿರ ಎಕರೆಗೆ ಮಾತ್ರ ನೀರು ಹರಿಸಲಾಗುತ್ತಿದೆ. ಈ ತಾರತಮ್ಯ ಸರಿಪಡಿಸಲು ಸರ್ಕಾರ ಎಡ ದಂಡೆಯಲ್ಲೂ ಸೂಕ್ಷ್ಮ ನೀರಾವರಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ನೀರಾವರಿ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆಯಲ್ಲಿ ಸರ್ಕಾರ ಪಕ್ಷಪಾತ ಮಾಡಬಾರದು. ಪ್ರತಿಪಕ್ಷದ ಶಾಸಕರ ಕ್ಷೇತ್ರಗಳಿಗೂ ವಿಶೇಷ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಮಠಾಧೀಶರ ಧರ್ಮ ಪರಿಷತ್ ವತಿಯಿಂದ ಕೆರೆ, ಜಲಾಶಯ ಹೂಳೆತ್ತುವಂಥ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಪರಿಷತ್ತು ನಿರಂತರವಾಗಿ ಜನಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದು ಹೇಳಿದರು.
ಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ, ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ, ಬಳ್ಳಾರಿಯ ಕಲ್ಯಾಣ ಸ್ವಾಮೀಜಿ, ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಉತ್ತಂಗಿಯ ಸೋಮಶಂಕರ ಸ್ವಾಮೀಜಿ, ಶಾಸಕ ಎಲ್.ಕೃಷ್ಣನಾಯ್ಕ, ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಸಂಜೀವರೆಡ್ಡಿ, ಮುಖಂಡರಾದ ಓದೋ ಗಂಗಪ್ಪ, ಎಂ.ಬಿ.ಬಸವರಾಜ, ಎಚ್.ಪೂಜಪ್ಪ, ಈಟಿ ಲಿಂಗರಾಜ, ಓಲಿ ಈಶಪ್ಪ, ಸಿರಾಜ್, ಪರಶುರಾಮ, ಎ.ಜೆ.ವೀರೇಶ, ವೀರಸಿಂಗ್ ರಾಠೋಡ್ ಉಪಸ್ಥಿತರಿದ್ದರು.

One attachment • Scanned by Gmail

ReplyForward