‘ಸಾಹೇಬ್ರು ಬಂದವೇ’ ನಾಟಕ ಪ್ರದರ್ಶನ

ಭಾಷೆಯಿಂದ ಜನಾಂಗ-ಸಂಸ್ಕೃತಿಯ ಪರಿಚಯ

ಪುತ್ತೂರು, ಜ.೧೧- ಭಾಷೆಯನ್ನು ಯುವ ಪೀಳಿಗೆಗೆ ತಿಳಿಸುವ ಮೂಲಕ ಅಕಾಡೆಮಿಯ ಉದ್ದೇಶವನ್ನು ತಿಳಿಸುವ ಕೆಲಸ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಭಾಷೆಯನ್ನು ಕಲಿಯುವ ಮೂಲಕ ಜನಾಂಗಕ್ಕೆ ಗೌರವ ಕೊಟ್ಟಂತಾಗುತ್ತದೆ. ಭಾಷೆಯು ಜನಾಂಗ ಹಾಗೂ ಸಂಸ್ಕೃತಿಯನ್ನು ಗುರುತಿಸುವ ಕೆಲಸ ಮಾಡುತ್ತದೆ ಶಾಸಕ ಸಂಜೀವ ಮಠಂದೂರು ಎಂದು ಹೇಳಿದರು.

ಡಾ. ಶಿವರಾಮ ಕಾರಂತರ ಬಾಲವನ ಹಾಗೂ ಪುತ್ತೂರು ಸಹಾಯಕ ಆಯುಕ್ತರ ಕಛೇರಿಯ ಆಶ್ರಯದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಸ್ತುತಪಡಿಸುವ ‘ಸಾಹೇಬ್ರು ಬಂದವೇ’ ನಾಟಕ ಪ್ರದರ್ಶನದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮವನ್ನು ಸಂಜೀವ ಮಠಂದೂರು ಉದ್ಘಾಟಿಸಿದರು.

 ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗಿದಾಗ ಕರ್ನಾಟಕದ ಜನತೆಗೆ ಅರೆಭಾಷೆ ಸಂಸ್ಕೃತಿಯ ಪರಿಚಯವನ್ನು ಅರೆಭಾಷೆ ಸಂಸ್ಕೃತಿಕ ಸಾಹಿತ್ಯ ಅಕಾಡೆಮಿಯ ಮೂಲಕ ಮಾಡಿಸಿದರು. ಪುತ್ತೂರು ಡಾ. ಶಿವರಾಮ ಕಾರಂತರ ಬಾಲವನದಲ್ಲಿ ತಿಂಗಳ ಕಾರ್ಯಕ್ರಮ ಸೇರಿದಂತೆ ವಾರಕ್ಕೊಂದು ಕಾರ್ಯಕ್ರಮವನ್ನು ನಿರಂತರ ಮಾಡಲಾಗುತ್ತಿದೆ. ಮುಂದಿನ ದಿನ ಬಾಲವನ ಹಿರಿಯರ ಬಾಲವನ ಆಗಬೇಕು. ಬಾಲವನದ ಒಟ್ಟು ಅಭಿವೃದ್ಧಿಗೆ ಉಸ್ತುವಾರಿ ಸಚಿವರು ಕೂಡಾ ಒಂದಷ್ಟು ಯೋಜನೆ ಹಾಕಿಕೊಂಡಿದ್ದಾರೆ ಎಂದರು.

ಸಾಹಿತ್ಯ, ಸಂಸ್ಕೃತಿಯ ಗುರುತ್ವ

ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ಮತ್ತು ಬಾಲವನ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಡಾ.ಯತೀಶ್ ಉಳ್ಳಾಲ್ ಅವರು ಮಾತನಾಡಿ, ಪುತ್ತೂರು ಸಾಹಿತ್ಯ ಮತ್ತು ಸಂಸ್ಕೃತಿಯ ಗುರುತ್ವ. ಅನೇಕ ಸಾಹಿತಿಗಳ ಕರ್ಮಭೂಮಿ. ಇಂತಹ ಸಂದರ್ಭದಲ್ಲಿ ಅರೆಭಾಷೆಯಲ್ಲಿ ಪ್ರದರ್ಶನಗೊಳ್ಳುತ್ತಿರುವ ನಾಟಕ ಪುತ್ತೂರಿನ ಕಿರೀಟಕ್ಕೆ ಗರಿಯಾಗಲಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಪ್ರಾದೇಶಿಕ ಭಾಷೆಯನ್ನು ಪರಿಚಯಿಸಲು ರಂಗಭೂಮಿ ಅಗತ್ಯ. ರಂಗಪಯಣದ ಮೂಲಕ ಇಂತಹ ಭಾಷೆಯ ಪರಿಚಯ ಮಾಡಲು ಸಹಕಾರ ಸಿಕ್ಕಿದೆ ಎಂದು ತಿಳಿಸಿದರು.

ಕರ್ನಾಟಕ ರಂಗ ಸಮಾಜದ ಸದಸ್ಯರು ರಂಗ ನಿರ್ದೇಶಕರು ಆಗಿರುವ ಜೀವನ್ ರಾಮ್ ಸುಳ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಟಕವನ್ನು ಅರೆಭಾಷೆಗೆ ಅನುವಾದ ಮಾಡಿದ ಜಯಪ್ರಕಾಶ್ ಕುಕ್ಕೇಟಿ ಉಪಸ್ಥಿತರಿದ್ದರು. ನಗರಸಭಾ ಸದಸ್ಯೆ ದೀಕ್ಷಾ ಪೈ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಹೆಚ್.ಡಿ. ಶಿವರಾಮ್, ತಹಶೀಲ್ದಾರ್ ರಮೇಶ್ ಬಾಬು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಲವನದ ವಿಶೇಷ ಕರ್ತವ್ಯಾಧಿಕಾರಿ ಡಾ. ಸುಂದರ್ ಕೇನಾಜೆ ಸ್ವಾಗತಿಸಿದರು. ಭರತ್ ಅಳಸಂಡೆಮಜಲು ವಂದಿಸಿದರು.