ಸಾಹಿತ್ಯ ಸಮ್ಮೇಳನದಿಂದ ಕನ್ನಡಾಭಿಮಾನ ಹೆಚ್ಚಳ: ಪರಮಾನಂದ ಶ್ರೀ

ಆಳಂದ: ನ.9:ಗಡಿಭಾಗದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯಿಂದ ಕನ್ನಡ ನಾಡು ನುಡಿ ನೆಲ, ಜಲ ಸಂಪತ್ತಿನ ಮಾನಾಭಿಮಾನ ಹೆಚ್ಚಾಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕನ್ನಡಪರ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದು ಯಳಸಂಗಿ ಸಿದ್ಧರೂಢ ಮಠದ ಶ್ರೀ ಪರಮಾನಂದ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಯಳಸಂಗಿ ಗ್ರಾಮದ ಸಿದ್ಧಲಿಂಗೇಶ್ವರ ವಿರಕ್ತ ಮಠದಲ್ಲಿ ಕಸಾಪ ತಾಲೂಕು ಘಟಕ ಆಯೋಜಿಸಿದ್ದ ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ನಡೆದ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಕಾರಣಿಕರ್ತರಾದ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಮುಖ್ಯಸ್ಥರಿಗೆ ಕೃತಜ್ಞತಾ ಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂಥ ಸಾಹಿತ್ಯ ಮತ್ತು ಕನ್ನಡದ ಚಟುವಟಿಕೆಗಳಿಂದ ಕನ್ನಡ ಮೇಲಿನ ಪ್ರೀತಿ ಹೆಚ್ಚಾಗುತ್ತಿದೆ. ಮಕ್ಕಳಿಗೂ ಕನ್ನಡದ ಅಭಿಮಾನ ಬೆಳೆಯುತ್ತದೆ. ನಾವೆಲ್ಲರೂ ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಕನ್ನಡದ ಕಾರ್ಯಕ್ರಮಗಳನ್ನು ಮಾಡುತ್ತಾ ಕನ್ನಡ ತಾಯಿಯ ಸೇವೆ ಸಲ್ಲಿಸೋಣಾ ಎಂದು ಸಲಹೆ ನೀಡಿದರು.

ಕಸಾಪ ಅಧ್ಯಕ್ಷ ಹಣಮಂತ ಶೇರಿ ಅವರು ಮಾತನಾಡಿ, ಸಾಹಿತ್ಯ ಸಮ್ಮೇಳನಕ್ಕೆ ನಿರೀಕ್ಷೆ ಮೀರಿ ಕನ್ನಡಾಭಿಮಾನಿಗಳು ಭಾಗವಹಿಸಿದ್ದು, ಅಮಂತ್ರಿತ ಬಹುತೇಕ ಸಾಹಿತಿಗಳು ಸನ್ಮಾನಿತರು ಆಗಮಿಸಿ ಸಮ್ಮೇಳನಕ್ಕೆ ಮೆರಗು ತಂದು ಸಮ್ಮೇಳನ ದಾಖಲೆ ಮೆರೆದಿದೆ. ಇದೇ ರೀತಿ ಮುಂದೆಯೂ ಕನ್ನಡ ಕಾರ್ಯಕ್ಕೆ ಬೆನ್ನಲುಬಾಗಿ ಸಹಾಯ ಸಹಕಾರ ನೀಡಬೇಕು ಎಂದು ಅವರು ಹೇಳಿದರು.

ಬಾಗಲಕೋಟದ ಪರಮಾನಂದ ಮಹಾಸ್ವಾಮಿಗಳು ಇದ್ದರು.

ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಧೂರಿ ಮೆರವಣಿಗೆಯಲ್ಲಿ ಭಾಗಿಯಾದ ವಿವಿಧ ಗ್ರಾಮಗಳ ಶಾಲೆಯ ಮಕ್ಕಳಿಳು ಮತ್ತು ಮುಖ್ಯ ಶಿಕ್ಷಕರಿಗೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಹಣಮಂತ ಶೇರಿ ಖಜೂರಿ ಹಾಗೂ ಸಂಘಟನಾ ಕಾರ್ಯದರ್ಶಿ ಸುಧಾಕರ್ ಖಾಂಡೇಕರ್ ಅವರು ಶ್ರೀಗಳು ಸೇರಿ ಕನ್ನಡ ಸೇವಾರ್ಥಿಗಳಿಗೆ ಕೃತಜ್ಞತಾ ಪತ್ರವನ್ನು ನೀಡಿ ಗೌರವಿಸಿದರು.

ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆ ಹಡಲಗಿಯ ಮುಖ್ಯಗುರು ನಾದೂರು ಕೆಂಚಪ್ಪ, ಸರ್ಕಾರಿ ಪ್ರೌಢಶಾಲೆ ಯಳಸಂಗಿ ದೈಹಿಕ ಶಿಕ್ಷಕರಾದ ಸಿದ್ಧರಾಮ ಪಾಳ್ಯದ ಹಾಗೂ ಮಲ್ಲಣ್ಣ ಮೇತ್ರೆ, ಅಶೋಕ್ ಚವಾಣ್, ವೀರಯ್ಯ ಸ್ವಾಮಿ ಸೇರಿದಂತೆ ಇನ್ನಿತರ ಶಾಲೆಯ ಮುಖ್ಯಗುರುಗಳು ಸಹ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು. ಸಾಗರ್ ನಿರೂಪಿಸಿದರು ವೀರಯ್ಯ ಸ್ವಾಮಿ ಮುಖ್ಯ ಗುರುಗಳು ವಂದಿಸಿದರು.