
ಕಲಬುರಗಿ,ಏ.24: ಕನ್ನಡ ಸಾಹಿತ್ಯವು ಪ್ರಾರಂಭದಿಂದಲೂ ಸಮಾಜದಲ್ಲಿನ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತ್ತ ಬಂದಿದ್ದು ಇನ್ನಷ್ಟು ಹೆಚ್ಚು ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರಗಳನ್ನು ತಿದ್ದುವ ಕೆಲಸ ಮಾಡಬೇಕಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷರಾದ ಬಾಬುರಾವ ಯಡ್ರಾಮಿ ಹೇಳಿದರು.
ಕಲಬುರಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಕೇತಕಿ ಸಂಗಮೇಶ್ವರ ಶಿಕ್ಷಣ ಟ್ರಸ್ಟ್ ಅವರ ಸಹಯೋಗದೊಂದಿಗೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಆಯೋಜಿಸಿದ್ದ ಸಂಗಮನಾಥ ಪಿ ಸಜ್ಜನರವರ ಅಕ್ಷರ ವೈಭವ ಕವನ ಸಂಕಲನ ಬಿಡುಗೊಳಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾ.ಟಿ.ಭಾಗ್ಯಮ್ಮ ಪುಸ್ತಕದ ಮುನ್ನುಡಿ,ಬೆನ್ನುಡಿಗೆ ಪ್ರಸಿದ್ಧ ಕವಿ ಸಾಹಿತಿಗಳ ಮೊರೆ ಹೋಗುವ ಸಂದರ್ಭದಲ್ಲಿ ಸಂಗಮನಾಥ ಪಿ ಸಜ್ಜನರವರು ತನ್ನ ತಾಯಿಯಿಂದಲೇ ಬೆನ್ನುಡಿ ಬರೆಸಿಕೊಂಡಿದ್ದಾರೆ. ಒಬ್ಬ ತಾಯಿ ತನ್ನ ಮಗನನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಮೊದಲ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ವಿಶ್ಲೇಷಿಸಿದರು.
ಮುಖ್ಯ ಅತಿಥಿಗಳಾಗಿ ಕಲಬುರಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗುರುಬಸಪ್ಪ ಎಸ್ ಸಜ್ಜನಶೆಟ್ಟಿ ಸ್ವಾಗತ ಭಾಷಣ ಮಾಡಿ ಕಸಾಪ ಒಂದಿಲ್ಲೊಂದು ವಿನೂತನ ಕಾರ್ಯಕ್ರಮ ನಡೆಸುವುದರಲ್ಲಿ ಕಲಬುರಗಿ ಘಟಕ ಪ್ರಸಿದ್ಧಿ ಪಡೆದಿದೆ ಎಂದರು.
ಪ್ರಾಸ್ತಾವಿಕ ನುಡಿಯಲ್ಲಿ ಕವಿ ಸಂಗಮನಾಥ ಪಿ ಸಜ್ಜನರವರು ಮಾತನಾಡಿ ವಿಶ್ವ ಪುಸ್ತಕ ದಿನ ಮತ್ತು ಬಸವ ಜಯಂತಿಯ ಶುಭಾಶಯ ತಿಳಿಸುತ್ತಾ ಇದು ನನ್ನ ಜೀವನದ ಅತಿದೊಡ್ಡ ಸಂಭ್ರಮದ ದಿನ, ಈ ದಿನವನ್ನು ನಾನು ಸದಾ ನೆನಪಿಟ್ಟುಕೊಳ್ಳಬೇಕಾಗಿದೆ, ಇದಕ್ಕೆ ಸಹಕರಿಸಿದ ಶಾಲೆ, ಶಿಕ್ಷಕರ ಬಳಗ,ಕುಟುಂಬ ವರ್ಗ, ಸ್ನೇಹಿತರ ಬಳಗವನ್ನು ಜೀವನದುದ್ದಕ್ಕೂ ಮರೆಯಲಾರೆ ಎನ್ನುತ್ತಾ ಸ್ವಾರ್ಥವಿಲ್ಲದ ಮನುಷ್ಯ ಬಾಳಲಾರ ಎಂಬ ಕವನದೊಂದಿಗೆ ಮಾತಿಗೆ ವಿರಾಮ ನೀಡಿದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ ಪತ್ರಕರ್ತ, ಶಿಕ್ಷಕ, ಲೇಖಕ ಸಮಾಜದ ನಿಜವಾದ ರಕ್ಷಕರು ಎನ್ನುತ್ತಾ ಅಕ್ಷರ ವೈಭವ ಕವನ ಸಂಕಲನವು ಸಮಾಜದಲ್ಲಿನ ಮೌಲ್ಯಗಳನ್ನು ಬಿತ್ತುವ ಮೂಲಕ ಪ್ರೀತಿ, ವಿಶ್ವಾಸಗಳ ಕೊರತೆಯನ್ನು ನೀಗಿಸುವಲ್ಲಿ ಯಶ್ವಸ್ವಿಯಾಗಲಿ ಅವರ ಸಾಹಿತ್ಯ ಕೃಷಿಯಲ್ಲಿ ಇನ್ನಷ್ಟು ಕೃತಿಗಳು ಹೊರಹೊಮ್ಮಲಿ ಎಂದು ಹಾರೈಸಿದರು.
ವೇದಿಕೆಯ ಮೇಲೆ ಟ್ರಸ್ಟ್‍ನ ಅಧ್ಯಕ್ಷರಾದ ಡಿ.ಪಿ.ಸಜ್ಜನ, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಮೋನಪ್ಪ ಬಡಿಗೇರ ಇದ್ದರು. ಕಾರ್ಯಕ್ರಮದಲ್ಲಿ ಉದಯೋನ್ಮುಖ ಕವಿ ಸಂಗಮನಾಥ ಪಿ ಸಜ್ಜನರವರಿಗೆ ತಾಲೂಕು ಕಸಾಪ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶರಣರಾಜ ಛಪ್ಪರಬಂದಿ, ಜಗದೀಶ ಮರಪಳ್ಳಿ, ರವೀಂದ್ರ ಭಂಟನಳ್ಳಿ, ಸಿದ್ದಣ್ಣ ಸಜ್ಜನ,ಪ್ರಭಾವ ಪಟ್ಟಣಕರ್, ವಿಶ್ವನಾಥ ತೊಟ್ನಳ್ಳಿ, ನಾಗರಾಜ ಸಜ್ಜನ ಭೀಮನಹಳ್ಳಿ, ಶರಣಬಸಪ್ಪ ನರೂಣಿ, ರಾಜೇಂದ್ರ ಮಾಡಬೊಳ,ಸಂತೋಷ ಸಜ್ಜನ ಎಇಇ, ಬಸವರಾಜ ಸಜ್ಜನ ಸುಲೇಪೇಟ, ಶರಣಬಸಪ್ಪ ಜಿಂಗಿನಮಠ, ರವಿಕುಮಾರ ಶಹಾಪೂರಕರ, ಮಾಲಾ ದಣ್ಣೂರ,ಶಿವಶರಣಪ್ಪ ಹಡಪದ, ಬಸವಂತರಾಯ ಕೋಳಕೂರ, ರಹೆಮಾನ್ ಪಟೇಲ್, ಧರ್ಮಣ್ಣ ಧನ್ನಿ, ಹಣಮಂತ ಕಲಶೆಟ್ಟಿ, ಮಲ್ಲು ಹರವಾಳ ಇತರರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿವರಾಜ ಅಂಡಗಿ, ಪ್ರಾರ್ಥನಾ ಗೀತೆ ಕವಿತಾ ಕವಳೆ, ವಂದನಾರ್ಪಣೆ ಮಲ್ಲಿಕಾರ್ಜುನ ಇಬ್ರಾಹಿಂಪುರ ನೆರವೇರಿಸಿದರು.