ಸಾಹಿತ್ಯ, ಸಂಸ್ಕೃತಿ ಗಾಯನಕ್ಕೆ ಅಳವಡಿಸುವುದು ಅಗತ್ಯ 

ಸಂಜೆವಾಣಿ ವಾರ್ತೆ

ದಾವಣಗೆರೆ ಮೇ.೮; ಗೀತಗಾಯನ ತರಬೇತಿ ಶಿಬಿರ ಒಂದೆರಡು ದಿನಗಳಿಗೆ ಸೀಮಿತವಾಗದೆ ಜೀವನಪರ್ಯಂತ ಅಭ್ಯಾಸವನ್ನು ಸಾಹಿತ್ಯ, ಸಂಸ್ಕೃತಿ, ಗಾಯನಕ್ಕೆ ಅಳವಡಿಸಿಕೊಳ್ಳುವುದು ತುಂಬಾ ಅಗತ್ಯ ಕಾಯಕ. ಎಲ್ಲಾ ಸಂಗೀತ ರಾಗಗಳು ಭಾವಗೀತೆ, ಭಕ್ತಿಗೀತೆ, ಜನಪದ ಗೀತೆಗಳೊಂದಿಗೆ ಸುಗಮ ಸಂಗೀತವು ಅನ್ವಯಿಸುತ್ತದೆ ಎಂದು ಹಿರಿಯ ಗಾಯಕಿ ನಿವೃತ್ತ ಪ್ರಾಧ್ಯಾಪಕರಾದ ಶ್ರೀಮತಿ ನೀಲಾಂಬಿಕೆ ತಮ್ಮ ಅನಿಸಿಕೆಗಳನ್ನು ವಚನ ಗಾಯನದೊಂದಿಗೆ ಹಂಚಿಕೊAಡರು. ದಾವಣಗೆರೆಯ ಶರದಿ ಕಲಾ ಸಾಂಸ್ಕೃತಿಕ ಸಂಸ್ಥೆ ಮತ್ತು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ  ನಗರದ ಆರ್.ಹೆಚ್.ಗೀತಾ ಮಂದಿರದಲ್ಲಿ ವಸಂತಋತುವಿನ ಬೇಸಿಗೆ ರಜೆಯ ಪ್ರಯುಕ್ತ ಗೀತ ಗಾಯನ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಅವರು ಮಾತನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ನಾಡಿನ ಖ್ಯಾತ ಸಂಗೀತ ನಿರ್ದೇಶಕರು ಹಿರಿಯ ಗಾಯಕರಾದ ಬೆಂಗಳೂರಿನ ಉಪಾಸನಾ ಮೋಹನ್ ವಹಿಸಿ ಮಾತನಾಡಿ, ಮಾನವನ ಜೀವನದಲ್ಲಿ ಸಂಗೀತ ಸಂಪ್ರದಾಯ ಪರಂಪರೆಗಳು ಒಂದು ಅವಿಭಾಜ್ಯ ಅಂಗ. ಸಂಕುಚಿತ ಭಾವನೆಗಳನ್ನು ಬಿಟ್ಟು ವಿಶಾಲವಾದ ಮನೋಭಾವನೆಯೊಂದಿಗೆ ನಾವು ನೀವೆಲ್ಲಾ ತೊಡಗಿಸಿಕೊಂಡಾಗ ಇಂತಹ ಸಂಘಟನೆಗಳು ನಿರಂತರ ಅಭಿವೃದ್ಧಿಯಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ದಾವಣಗೆರೆ ತಾಲ್ಲೂಕು ಘಟಕದ ಅಧ್ಯಕ್ಷರಾದ ವಿದ್ವಾನ್ ಮಾಲತೇಶ್ ಕುಲಕರ್ಣಿ, ದಾವಣಗೆರೆಯ ಅನುಶ್ರೀ ಸಂಗೀತ ಶಾಲೆಯ ಸಂಸ್ಥಾಪಕರಾದ ವಿದುಷಿ ವೀಣಾಸದಾನಂದ ಹೆಗಡೆ, ಮಾತನಾಡಿ, ರಾಗ, ತಾಳ, ರಾಗ ಸಂಯೋಜನೆಗಳ ಪರಿಜ್ಞಾನದೊಂದಿಗೆ ಮಕ್ಕಳು ಬೆಳೆಸಿಕೊಂಡರೆ ಮುಂದೆ ಅವರು ವಿದ್ವಾನ್ ವಿದುಷಿಗಳಾಗಿ ನಾಡಿನ ಖ್ಯಾತ ಸಂಗೀತಗಾರರಾಗುತ್ತಾರೆ ಎಂದು ಶಿಬಿರದ ಶಿಬಿರಾರ್ಥಿಗಳಿಗೆ ಶುಭ ಕೋರಿದರು.  ಶರದಿ ಕಲಾ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ವಿದುಷಿ ಶೋಭಾ ರಂಗನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಸಂಗೀತ ಪಾಠ ರೂಡಿಸಿಕೊಂಡರೆ ಶಿಕ್ಷಣಕ್ಕೆ ಪರಿಪೂರ್ಣತೆ ಬರುತ್ತದೆ. ಈ ಹಂತದಲ್ಲಿ ಪೋಷಕರು, ಮಕ್ಕಳಿಗೆ ಪರಿಪೂರ್ಣತೆಯಿಂದ ಬೆನ್ನೆಲುಬಾಗಿ ನಿಲ್ಲಬೇಕಾಗಿದೆ ಎಂದರು.