ಸಾಹಿತ್ಯ ಸಂಸ್ಕೃತಿ ಕಲೆ ಉಳಿಸಿ-ಬೆಳೆಸಲು ಕರೆ

ಕೋಲಾರ,ಏ.೬: ಸಿರಿಗನ್ನಡ ವೇದಿಕೆ ವತಿಯಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ಗಡಿ ಪ್ರದೇಶದಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಹಮ್ಮಿಕೊಳ್ಳುವ ಮೂಲಕ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸವನ್ನು ಮಾಡಲಾಗುತ್ತದೆ ಎಂದು ಸಿರಿಗನ್ನಡ ವೇದಿಕೆ ನೂತನ ಜಿಲ್ಲಾಧ್ಯಕ್ಷ ಹೆಚ್.ರಾಮಚಂದ್ರಪ್ಪ ಹೇಳಿದರು.
ನಗರದ ವೆಂಕಟೇಶ್ವರ ನರ್ಸಿಂಗ್ ಹೋಮ್‌ನಲ್ಲಿ ಸಿರಿಗನ್ನಡ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಪ್ರಮಾಣಪತ್ರವನ್ನು ಪಡೆದುಕೊಂಡು ಮಾತನಾಡಿದ ಅವರು, ಕೋಲಾರದಲ್ಲಿ ಅನ್ಯ ಭಾಷಿಗರ ಒಲವು ಹೆಚ್ಚಾಗಿದೆ. ಹೀಗಾಗಿ ಕನ್ನಡ ಭಾಷೆಯ ಬಗ್ಗೆ ನಿರಾಸಕ್ತಿಯನ್ನು ತೋರುತ್ತಿದ್ದು,ಈ ನಿಟ್ಟಿನಲ್ಲಿ ಕನ್ನಡ ಭಾಷಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಸಿರಿಗನ್ನಡ ವೇದಿಕೆ ವತಿಯಿಂದ ಮುಂದಿನ ದಿನಗಳಲ್ಲಿ ಯುವ ಕವಿಗಳಿಗೆ ಹಮ್ಮಿಕೊಳ್ಳುವ ವಿಚಾರಗೋಷ್ಟಿ, ಕವಿಗೋಷ್ಟಿಗಳಿಗೆ ನೇರ, ನಿಷ್ಟೂರವಾದಿರ್ಪುಗಾರರನ್ನು ನೇಮಿಸುವ ಮೂಲಕ ಯುವ ಕವಿಗಳ ಸಣ್ಣಪುಟ್ಟ ತಪ್ಪುಗಳನ್ನು ತಿದ್ದುವ ಕೆಲಸವನ್ನು ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಸಿರಿಗನ್ನಡ ವೇದಿಕೆ ವತಿಯಿಂದ ಕನ್ನಡಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ, ಕನ್ನಡ ಭಾಷೆ ಅಭಿವೃದ್ಧಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಪೋಸ್ಟ್ ನಾರಾಯಣಸ್ವಾಮಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಯುವ ಜನತೆ ಸೇರಿದಂತೆ ಪ್ರತಿಯೊಬ್ಬರಲ್ಲೂ ಕನ್ನಡ ಬೆಳೆಸುವ ಮೂಲಕ ಅವರ ಪ್ರತಿಭೆಯನ್ನು ಗುರ್ತಿಸಿ ಪ್ರೋತ್ಸಾಹಿಸಿ ಹಳ್ಳಿಗಳಲ್ಲಿ ಕನ್ನಡದ ಬಗ್ಗೆ ಪ್ರೀತಿ, ಪ್ರೇಮ ಬೆಳೆಸುವ ಕಾರ್ಯಕ್ರಮಗಳನ್ನು ರೂಪಿಸಿ ಗಡಿನಾಡು ಪ್ರದೇಶದಲ್ಲಿ ಕನ್ನಡ ಕವಿಗೋಷ್ಟಿಗಳನ್ನು ಮಾಡುವ ಮೂಲಕ ಯುವ ಜನತೆಯಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದರು.
ಜಿಲ್ಲಾ ಉಪಾಧ್ಯಕ್ಷ ಸುಬ್ಬರಾಮಯ್ಯ ಮಾತನಾಡಿ, ನೂತನವಾಗಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಹೆಚ್ ರಾಮಚಂದ್ರಪ್ಪ ರವರು ಹಂತಹಂತವಾಗಿ ಪದಾಧಿಕಾರಿಗಳ ಸಭೆಗಳನ್ನು ನಡೆಸಿ ಉತ್ತಮ ಕಾರ್ಯಕ್ರಮಗಳನ್ನು ನಡೆಸಿ ಅಧೋಗತ್ತಿಗೆ ಹೋಗಿರುವ ಕನ್ನಡ ಭಾಷೆಯನ್ನು ಪ್ರತಿಯೊಬ್ಬರು ಮೈಗೂಡಿಸುವ ಕೆಲಸವನ್ನು ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಸಿರಿಗನ್ನಡ ವೇದಿಕೆಯ ಗೌರವಾಧ್ಯಕ್ಷ ಡಾ.ಕೆ.ಎಂ.ಜೆ ಮೌನಿ, ಜಿಲ್ಲಾ ಉಪಾಧ್ಯಕ್ಷ ಬೆಗ್ಲಿ ಮಂಜುನಾಥ್, ಡಾ.ಮುನಿರಾಜು, ಕಾರ್ಯದರ್ಶಿ ಬಿ.ಆರ್ ಲಕ್ಷ್ಮಣ್‌ಗೌಡ, ಖಜಾಂಚಿ ಸಿ.ರವೀಂದ್ರಸಿಂಗ್, ಮಹಿಳಾ ಘಟಕದ ಕೋಮಲ ಸುಮಿತ್ರ, ಡಾ.ರಾಧಾ ಪ್ರಕಾಶ್ ಉಪಸ್ಥಿತರಿದ್ದರು.