ಸಾಹಿತ್ಯ, ಸಂಸ್ಕೃತಿ, ಕಲೆಗಳ ಅಕ್ಷಯನಿಧಿ ಕನ್ನಡನಾಡು; ಯುಗಧರ್ಮ ರಾಮಣ್ಣ ಬಣ್ಣನೆ

ದಾವಣಗೆರೆ.ಮಾ.೪; ಕನ್ನಡ ನಾಡು-ನುಡಿಯೇ ಚೈತನ್ಯದ ಜಲಪಾತ. ಸಾಹಸಿಗಳು ಪ್ರಸಿದ್ಧ ಸಾಧನೆಯಿಂದ ಮರೆಯಲಾಗದ ಮಹಾನ್ ಸಾಮ್ರಾಜ್ಯಗಳ ತಾಣದಿಂದ ಸಾಹಿತ್ಯ, ಸಂಸ್ಕೃತಿ, ಕಲೆಗಳ ಅಕ್ಷಯನಿಧಿಯಾದ ಕನ್ನಡನಾಡಿಗೆ ಅನನ್ಯವಾದ ಇತಿಹಾಸ ಪರಂಪರೆಯಿದೆ ಎಂದು ದಾವಣಗೆರೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಯುಗಧರ್ಮ ರಾಮಣ್ಣ ಬಣ್ಣಿಸಿದರು.ಚನ್ನಗಿರಿ ತಾಲ್ಲೂಕಿನ ಹರನಹಳ್ಳಿ- ಕೆಂಗಾಪುರದಲ್ಲಿ ಇಂದು ಹಮ್ಮಿಕೊಂಡಿದ್ದ ದಾವಣಗೆರೆ ಜಿಲ್ಲಾ ೧೨ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರುಶಿಲಾಯುಗದಷ್ಟು ಪುರಾತನವಾದ ಈ ನಮ್ಮ ನಾಡು ಕವಿಗಳ, ದಾರ್ಶನಿಕರ, ಚಿಂತಕರ, ಮೇಧಾವಿಗಳ ಗೂಡು,ಈ ನಮ್ಮ ನಾಡನ್ನು ಗಂಗ, ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯಗಳು ಆಳ್ವಿಕೆ ಮಾಡಿ, ಬೆಳೆಸಿ, ಬೆಳಗಿಸಿವೆ. ಇಲ್ಲಿನ ವಾಸ್ತುಶಿಲ್ಪಗಳು, ಗುಡಿಗೋಪುರಗಳು, ಕೋಟೆಕೊತ್ತಲಗಳು, ಜಗತ್ ಪ್ರಸಿದ್ಧಿ ಪಡೆದಿವೆ. ಕಾವೇರಿಯಿಂದ ಗೋದಾವರಿವರೆಗೂ ಹಬ್ಬಿದ ಈ ನಮ್ಮ ನಾಡು ಸಹಸ್ರ ಸಾಹಿತಿ ನೆಲೆಯಿದು. ಈ ನಮ್ಮ ನಾಡಿಗೆ ಆಂಧ್ರಪ್ರದೇಶದಲ್ಲಿರುವ ಆದವಾನಿ, ಆಲೂರು, ರಾಯದುರ್ಗ, ಮಡಕಶಿರಾ, ಕಲ್ಯಾಣದುರ್ಗ, ಹಿಂದೂಪುರ, ಮಹಾರಾಷ್ಟ್ರದಲ್ಲಿರುವ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ನೆಲದುರ್ಗ, ಉದುರ್ಗ, ಮಂಗಳವೇಡೆ, ತಮಿಳುನಾಡಿ ನಲ್ಲಿರುವ ನೀಲಗಿರಿ ಗುಡಲೂರು, ಊಟಿ, ಕೂನೂರು, ಬೆರಂಗೂರು, ಹೊಸರು, ಕೃಷ್ಣಗಿರಿ, ಕೇರಳದಲ್ಲಿರುವ ಕಾಸರಗೋಡು, ವಯನಾಡು ಇವುಗಳು ನಮ್ಮ ಕನ್ನಡನಾಡಿಗೆ ಸೇರಿದಾಗ ಮಾತ್ರ ಸಮ ಕರ್ನಾಟಕವಾಗುವುದು. ಆದಷ್ಟು ಬೇಗ ಈ ಅಚ್ಚಗನ್ನಡ ಪ್ರದೇಶಗಳು ಕನ್ನಡನಾಡಿಗೆ ಸೇರುವಂತಾಗಲೆಂಬ ಹೆಬ್ಬಯಕೆ ನನ್ನದು ಎಂದರು. ಜಿಲ್ಲೆಗೆ ಬಹು ಉಪಯುಕ್ತವಾದ ಜೀವನದಿ ತುಂಗಭದ್ರ ಸಾವಿರಾರು ಹೆಕ್ಟೇರು ಭೂಮಿಗೆ ನೀರೊದಗಿಸಿ, ಜನತೆಗೆ ಅನ್ನದಾತೆಯಾಗಿದ್ದಾಳೆ. ಈ ನಮ್ಮ ಜಿಲ್ಲೆಯಲ್ಲಿ ನೂರಾರು ಕೆರೆಗಳಿವೆ. ಸೂಳೆಕೆರೆ ಆಕರ್ಷಣೀಯ ತಾಣವಾಗಿದೆ.ಶಾಸನಗಳಲ್ಲಿ ದಾಖಲಾಗಿರುವಂತೆ ದಾವಣಗೆರೆ ಧರ್ಮದ ತವರುಮನೆ, ದೇವರ ಜನ್ಮಭೂಮಿ, ಧರ್ಮಪುರಂ, ಶಿವಧರ್ಮ ದೀಪಕಂ, ವಣಿಗರ ದೇವನಗರಿಯಂ ಎ೦ಬ೦ತೆ – ಇಲ್ಲಿನ ವರ್ತಕರು ಮಹಾದಾನಿಗಳು, ದಾವಣಗೆರೆ ಬೆಣ್ಣೆದೋಸೆಗೂ ಪ್ರಸಿದ್ಧಿ, ಈ ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರು ಸೀಮೆಯು ನಾಡು-ನುಡಿಗೆ ಅಪೂರ್ವ ಕಾಣೆ ನೀಡಿದ ಪುಣ್ಯಭೂಮಿ ಎಂದರು.ಇದೇ ವೇಳೆ  ಸ್ವರಚಿತ ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು.