ಸಾಹಿತ್ಯ-ಸಂಸ್ಕೃತಿ ಕನ್ನಡ ಭಾಷೆಯ ಜೀವಾಳ

ತಿಪಟೂರು, ನ. ೨೨- ಸಾಹಿತ್ಯ ಹಾಗೂ ಸಂಸ್ಕೃತಿಯೇ ಕನ್ನಡ ಭಾಷೆಯ ಜೀವಾಳವಾಗಿದ್ದು, ಕನ್ನಡ ಉಳಿಸಿ-ಬೆಳೆಸಲು ಪ್ರತಿಯೊಬ್ಬ ಕನ್ನಡಿಗ ಮುಂದಾಗಬೇಕು ಎಂದು ಸಾಹಿತಿ ನಾರಾಯಣ್ ಭಗ್ವತ್ ಕರೆ ನೀಡಿದರು.
ನಗರದ ಶ್ರೀ ಸತ್ಯಗಣಪತಿ ಅಮೃತ ಮಹೋತ್ಸವ ಭವನದಲ್ಲಿ ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದಿಂದ ಏರ್ಪಡಿಸಿದ್ದ ೬೫ನೇ ಕನ್ನಡ ರಾಜ್ಯೋತ್ಸವ ಹಾಗೂ ಮುಕ್ತಕಗಳ ವಾಚನ ಮತ್ತು ಭಾವ ಗೀತೆಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿದರು.
ಕನ್ನಡ ಭಾಷೆ ೨೦೦೦ ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ಭಾಷೆಯಾಗಿದ್ದು, ಕನ್ನಡ ಉಳಿವಿಗೆ ಪಂಪ-ರನ್ನರಂತ ಅನೇಕ ಮಹಾನ್ ಕವಿಗಳು ಸಾಹಿತ್ಯ ರಚನೆ ಮೂಲಕ ಶ್ರಮಿಸಿದ್ದಾರೆ. ಸಾಹಿತ್ಯ ಬೆಳೆವಣಿಗೆಯಾದಂತೆ ಭಾಷೆ ಬೆಳವಣಿಗೆಯಾಗುತ್ತದೆ. ಕನ್ನಡದಲ್ಲಿ ಪ್ರಾಚೀನ ಕನ್ನಡ, ಹಳೆಗನ್ನಡ, ನಡುಗನ್ನಡ ಸೇರಿದಂತೆ ಹಲವಾರು ಆಯಾಮಗಳನ್ನು ಕಾಣಬಹುದಾಗಿದ್ದು, ದಾಸರ ಕಾಲದ ಕಾಲಘಟ್ಟದಲ್ಲಿ ಆದ ಬೆಳವಣಿಗೆಗಳು ಜಾನಪದ ಸಾಹಿತ್ಯದ ಮೂಲಕ ಜನಸಾಮಾನ್ಯರ ಭಾಷೆಯಾಗಿ ಸಾಹಿತ್ಯ ರೂಪುಗೊಂಡವು. ಕನ್ನಡ ಭಾಷೆ ಹಾಗೂ ನಾಡು-ನುಡಿಯ ಸೊಬಗನ್ನು ಪಂಪನ ಕಾವ್ಯದಲ್ಲಿ ಕಾಣಬಹುದು. ನಮ್ಮ ಸಾಹಿತ್ಯ, ಭಾಷೆ, ಸಂಸ್ಕೃತಿ ಉಳಿವಿಗೆ ಪ್ರತಿಯೋಬ್ಬ ಕನ್ನಡಿಗನ ಶ್ರಮ ಅಗತ್ಯ ಎಂದರು.
ಶಾಸಕ ಬಿ.ಸಿ. ನಾಗೇಶ್ ಮಾತನಾಡಿ, ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಗೆ ಬದಲಾವಣೆ ತರುವ ಮೂಲಕ ದೇಶದಲ್ಲಿ ಸ್ಥಳೀಯ ಭಾಷೆಗಳ ಶಿಕ್ಷಣ ನೀಡಬೇಕು ಹಾಗೂ ಮೂಲ ಸಂಸ್ಕೃತಿ ಶಿಕ್ಷಣ ಭಾಗವಾಗಬೇಕು ಎನ್ನುವ ಉದೇಶ ಹೊಂದಿದೆ ಎಂದರು.
ಕನ್ನಡ ಭಾಷಾ ಪರಂಪರೆ ದೇಶದ ಇತಿಹಾಸದಲ್ಲಿ ಅತ್ಯುತ್ತಮ ಸ್ಥಾನ ಹೊಂದಿದೆ. ನಮ್ಮ ಸಂಸ್ಕೃತಿ, ಸಾಹಿತ್ಯ, ನೆಲ, ಜಲ, ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಹೊಣೆ. ಭಾರತ ಮಾತೆಯ ಮಕ್ಕಳಾಗಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂದ ಅವರು, ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ ನಾಡಿನ ಹೆಸರಾಂತ ಸಾಹಿತಿಗಳು, ಚಿಂತಕರಿಂದ ಉತ್ತಮ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಕನ್ನಡದ ಉಳಿವಿಗೆ ಅಳಿಲು ಸೇವೆ ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಹಾಗೂ ನಿವೃತ್ತ ಪೋಲಿಸ್ ಅಧಿಕಾರಿ ಲೋಕೇಶ್ವರ್ ಮಾತನಾಡಿ, ಕನ್ನಡ ಬೆಳೆಯ ಬೇಕಾದರೆ ಸಾಹಿತ್ಯ ಬೆಳೆಯಬೇಕು. ಕನ್ನಡಿಗರಲ್ಲಿ ಕನ್ನಡದ ಅಸ್ಮಿತೆ ಬೆಳೆಯಬೇಕು. ಇತ್ತಿಚಿನ ದಿನಗಳಲ್ಲಿ ಟಿ.ವಿ ಹಾಗೂ ಮೊಬೈಲ್ ವ್ಯಾಮೋಹದಿಂದ ಸಾಹಿತ್ಯದ ಗೀಳು ಕಡಿಮೆಯಾಗುತ್ತಿದ್ದು, ಸಾಹಿತ್ಯ ಉಳಿಸಲು ಓದುಗರ ಪಾತ್ರ ಮುಖ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಚಂದನ್‌ಕುಮಾರ್, ತಹಶೀಲ್ದಾರ್ ಚಂದ್ರಶೇಖರಯ್ಯ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್, ಸಂಘದ ಅಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ಎನ್. ಬಾನುಪ್ರಶಾಂತ್, ಉಪಾಧ್ಯಕ್ಷರಾದ ಗೌರಮ್ಮ ಮೂರ್ತಿ, ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.