ಸಾಹಿತ್ಯ, ಸಂಗೀತ ಹದವಾಗಿ ಬೆರೆತು ಅಮೃತವಾಗಲಿ

ಹುಬ್ಬಳ್ಳಿ,ಜು30: ಸಾಹಿತ್ಯ ಅಂದರೆ ಕಾವ್ಯದ ಅರ್ಥವೂ, ಸಂಗೀತದ ನಾದವೂ ಹದವಾಗಿ ಬೆರೆತು ಪಂಚಾಮೃತವಾದಾಗಲೇ ಸುಗಮ ಸಂಗೀತವು ಪರಿಪೂರ್ಣವಾಗುವುದು ಎಂದು ಕನ್ನಡದ ಪ್ರಸಿದ್ಧ ಕವಿ ಆನಂದ ಜಂಜರವಾಡ ಹೇಳಿದರು.
ಕರ್ನಾಟಕ ಸಂಗೀತ ನೃತ್ಯಅಕಾಡೆಮಿಯು ಸ್ಟೇಷನ್‍ರಸ್ತೆ ಈಶ್ವರ ದೇವಸ್ಥಾನ ಸಭಾಂಗಣದಲ್ಲಿ ಏರ್ಪಡಿಸಿರುವ ಸುಗಮ ಸಂಗೀತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾಡಲು ಆಯ್ಕೆ ಮಾಡಿಕೊಂಡ ಕವಿತೆಯನ್ನು ಕಲಾವಿದರು ಮೊದಲು ಅರ್ಥ ಮಾಡಿಕೊಳ್ಳಬೇಕು. ಬರೀ ಶಬ್ದವಾಕ್ಯಗಳ ಅರ್ಥವಲ್ಲದೇ ಸಾಲುಗಳ ನಡುವಿನ ಮೌನವನ್ನೂ ಅರಿಯಬೇಕು. ಅದನ್ನು ತಮ್ಮ ಸಂಗೀತ ಮಾಧ್ಯಮದ ಮೂಲಕ ಕೇಳುಗರಿಗೆ ತಲುಪಿಸಬೇಕು ಎಂದ ಅವರು ಕಾವ್ಯದಲ್ಲಿ ಸಂಗೀತವನ್ನೂ, ಸಂಗೀತದಲ್ಲಿ ಕಾವ್ಯವನ್ನೂ ಕಾಣಿಸುವ ಎಚ್ಚರಯಾವಾಗಲೂ ಇರಬೇಕು ಎಂದು ಕಿವಿಮಾತು ಹೇಳಿದರು.
ವಯಸ್ಸಾದರೂ ಕೂಡ ಸಂಗೀತ ಕಲಿಯುವ ಹಂಬಲ ಇದ್ದೇಇರುತ್ತದೆ, ಕಾರ್ಯಾಗಾರದಲ್ಲಿ ಭಾಗವಹಿಸಿರುವ ಕಿರಿಯರು, ಹಿರಿಯರು ಶ್ರದ್ಧೆಯಿಂದ ಕಲಿತು, ಕಾರ್ಯಾಗಾರವನ್ನು ಯಶಸ್ವಿಗೊಳಿಸಬೇಕೆಂದು ಮುಖ್ಯ ಅತಿಥಿ ಹುಧಾ ಮಹಾನಗರ ಪಾಲಿಕೆ ಉಪ ಮಹಾಪೌರ ಶ್ರೀಮತಿ ಉಮಾ ಮುಕುಂದ ಮನವಿ ಮಾಡಿದರು.
ಮೂರುಸಾವಿರಮಠ ಮಹಿಳಾ ಕಾಲೇಜಿನ ಸಂಗೀತ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ ಲಕ್ಷ್ಮಿಪಿ.ಡಿ, ಈಶ್ವರದೇವಸ್ಥಾನದ ಸಂಸ್ಥಾಪಕ ಅಧ್ಯಕ್ಷ ಬಾಲಚಂದ್ರ ಜೋಶಿ, ರಂಗ ನಿರ್ದೇಶಕ ಸುಭಾಸ ನರೇಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀಕಾಂತ ಕುಲಕರ್ಣಿ, ವಾಸುದೇವತಾಮಣಕರ, ಶ್ರೀಮತಿ ವೀಣಾ ಅಠವಲೆ, ಅಕಾಡೆಮಿ ಸದಸ್ಯೆ ಹೇಮಾ ವಾಘ್ಮೋಡೆ, ವೀರಣ್ಣ ಪತ್ತಾರ, ಲಕ್ಷಣರಾವ್‍ಓಕ್, ಗುರುರಾಜ ಕೌಜಲಗಿ, ಉಮೇಶ ಪಾಟೀಲ, ನರಸಿಂಹ ಕೊತವಾಲ, ಭೀಮಸೇನ ಕೌಜಲಗಿ, ಉಷಾ ಶೆಟ್ಟಿ ಉಪಸ್ಥಿತರಿದ್ದರು.