
ಬೀದರ್:ಮಾ.26: ಈ ಭಾಗದಲ್ಲಿ ಕಾವ್ಯ ಹಾಗೂ ಸಾಹಿತ್ಯ ಶ್ರೀಮಂತಗೊಳ್ಲಲು ಇಲ್ಲಿಯ ಲೇಖಕಿಯರು ಕೈ ಜೋಡಿಸಬೇಕೆಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ ಸದಸ್ಯೆ ಡಾ.ಗುರಮ್ಮ ಸಿದ್ದಾರೆಡ್ಡಿ ತಿಳಿಸಿದರು.
ಶನಿವಾರ ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರದ ಹೋಟಲ ಕೃಷ್ಣ ರೆಸಿಡೆನ್ಸಿ ಅವರಣದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದಿಂದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದ ವಚನ ಸಾಹಿತ್ಯ ಹಾಗೂ 15ನೇ ಶತಮಾನದಲ್ಲಿ ರಚನೆಯಾದ ದಾಸ ಸಾಹಿತ್ಯಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಪ್ರಮುಖ ಪಾತ್ರ ವಹಿಸಿವೆ. ಜೈನ ಧರ್ಮದ 19ನೇ ತಿರ್ಥಂಕರರು ಬಾಳಿ ಬದುಕಿದ ಭೂಮಿ ಇದು. ಹಾಗೇ ಕನ್ನಡದ ಮೊದಲ ಗದ್ಯ ಗ್ರಂಥ ವಡ್ಡಾರಾಧನೆ ರಚಿಸಿದ ಕೀರ್ತಿ ಬೀದರ್ ಜಿಲ್ಲೆಯವರಿಗೆ ಸಲ್ಲುತ್ತದೆ. ಇಂಥ ಪವಿತ್ರ ನೆಲ, ಜಲ ಹಾಗೂ ಸಾಹಿತ್ಯದ ಬಗ್ಗೆ ನಾವು ಅಭಿಮಾನ ಪಡಬೇಕೆಂದು ಕರೆ ನೀಡಿದರು.
ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ಇತ್ತಿಚೀಗೆ ಲೇಖಕಿಯರ ಸಂಘ ಜಿಲ್ಲೆಯಲ್ಲಿ ಬಲಿಷ್ಟವಾಗಿದ್ದು, ಮುಂಬರುವ ದಿನಗಳಲ್ಲಿ ಸಂಘದಿಂದ ಪುಸ್ತಕಗಳು ಪ್ರಕಟಿಸುವ ಹಾಗೂ 80 ವರ್ಷ ಮೇಲ್ಪಟ್ಟ ಅದೆಷ್ಟೋ ಗ್ರಾಮೀಣ ಜಾನಪದ ಕಲಾವಿದೆಯರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕೆಂದು ತಿಳಸಿದರು.
ಲೇಖಕಿಯರ ಸಂಘದ ಜಿಲ್ಲಾ ಗೌರವಾದ್ಯಕ್ಷೆ ಲೀಲಾವತಿ ನಿಂಬೂರ ಮಾತನಾಡಿ, ಕೃತಿ ಅಧ್ಯಯನ ಹಾಗೂ ಬರವಣೆಗಿಯಿಂದ ಕವಿಯಾದವರಿಗೆ ನಿಜವಾದ ಆನಂದ ದೊರೆಯುತ್ತದೆ. ಸಾಹಿತಿಯ ನಿಜವಾದ ಗೆಳೆಯನೆಂದರೆ ಪುಸ್ತಕ. ಅದನ್ನು ನಿತ್ಯದ ಹವ್ಯಾಸ ಮಾಡಿಕೊಂಡರೆ ಸಮಾಜದಲ್ಲಿ ಜ್ಞಾನದ ಕೊರತೆ ಕಂಡು ಬರುವುದಿಲ್ಲ ಎಂದರು.
ಸಂಘದ ಉಪಾಧ್ಯಕ್ಷೆ ಪುಣ್ಯವತಿ ವಿಸಾಜಿ ಮಾತನಾಡಿ, ಮಹಿಳೆಯ ವಾಸ ಇದ್ದ ಕಡೆ ಅಲ್ಲಿ ದೇವತೆಗಳ ವಾಸ ಇರುತ್ತದೆ. ಅಂದು ಮಹಿಳೆಯರು ಕೇವಲ ಭೋಗದ ವಸ್ತು, ಮಕ್ಕಳು ಹೆತ್ತುವ ಯಂತ್ರ, ಅಡುಗೆ ಮನೆಯ ಒಡತಿಗೆ ಸೀಮಿತವಾದ ಈಕೆ ಈಗ ಮನೆ ಹೊರಗೂ ದುಡಿದು ತನ್ನ ಜವಾಬ್ದಾರಿ ಹೆಚ್ಚಿಸಿಕೊಂಡಿರುವಳು ಎಂದರು.
ಅಧ್ಯಕ್ಷತೆ ವಹಿಸಿದ ಸಂಘದ ಜಿಲ್ಲಾಧ್ಯಕ್ಷೆ ಭಾರತಿ ವಸ್ತ್ರದ್ ಮಾತನಾಡಿ, 40 ವರ್ಷಗಳ ಹಿಂದೆ ಬರೀ ಬೆಂಗಳೂರಿಗೆ ಸೀಮಿತವಾಗಿರುವ ಸಂಘ ಇಂದು ನಾಡಿನ ಉದ್ದಗಲಕ್ಕೂ ಪಸರಿಸುತ್ತಿದೆ. ಕೇವಲ 28 ಸದಸ್ಯರು ಹೊಂದಿರುವ ಈ ಸಂಘಕ್ಕೆ ಇಂದು ಜಿಲ್ಲೆಯಲ್ಲಿ 55 ಜನ ಲೇಕಕಿಯರು ಕೈಜೋಡಿಸಿರುವರು. ಮುಂದಿನ ಮಾರ್ಚ್ 8ರಂದು ಮಹಿಳಾ ದಿನಾಚರಣೆ ದಿನದಂದು ಒಮ್ಮೇಲೆ 8 ಕೃತಿಗಳನ್ನು ಹೊರ ತರುವ ಕಾರ್ಯ ಮಾಡಲಿದೆ. ಜಿಲ್ಲೆಯಲ್ಲಿ ಸಂಘದಿಂದ ಕಮ್ಮಟಗಳ ಹಾಗೂ ತರಬೇತಿಗಳ ಆಯೋಜನೆ ಜೊತೆಗೆ ಕವಿಗೋಷ್ಟಿ ಹಮ್ಮಿಕೊಳ್ಲಲಾಗುವುದು ಎಂದರು.
ಪ್ರಾಸ್ತಾವಿಕ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಜಯದೇವಿ ಯದಲಾಪುರೆ ಅವರು, ಜಿಲ್ಲೆಯಲ್ಲಿ ಲೇಖಕಿಯರ ಸಂಘ ಹುಟ್ಟು ಹಾಕಿರುವ ಕೀರ್ತಿ ದಿ.ಯಶೋದಮ್ಮ ಸಿದಬಟ್ಟಿಯವರಿಗೆ ಸಲ್ಲುತ್ತದೆ. ಮುಂದೆ ನಮ್ಮ ನಡೆ ಶಾಲೆ ಕಡೆಗೆ ಎಂಬ ಧೈಹ್ಯವಾಕ್ಯದಡಿ ಗ್ರಾಮೀಣ ಭಾಗದ ಶಾಲೆ ಹೆಣ್ಣು ಮಕ್ಕಳಿಗೆ ಕಾವ್ಯ ರಚನೆ ಬಗ್ಗೆ ತರಬೇತಿ ನೀಡಿ ಹೊಸ ಪ್ರತಿಭೆಗಳು ಅರಳಿಸಲು ಸಂಘ ಕಾರ್ಯತತ್ಪರವಾಗಲು ಅಣಿಯಾಗಿದೆ ಎಂದರು. ಕಾರ್ಯದರ್ಶಿ ವಿದ್ಯಾವತಿ ಬಲ್ಲೂರ್ ಕವನ ವಾಚನ ಮಾಡಿದರು.
ನಿವೃತ್ತ ಪ್ರಾಚಾರ್ಯೆ ಪ್ರೊ.ಲೀಲಾವತಿ ಚಾಕೋತೆ, ಉದ್ಯಮಿ ಸುವರ್ಣಾ ಧನ್ನೂರ್ ಹಾಗೂ ನಗರ ಸಭೆ ಸದಸ್ಯೆ ಶಾಲಿನಿ ಚಿಂತಾಮಣಿ ವೇದಿಕೆಯಲ್ಲಿದ್ದರು.
ಆರಂಭದಲ್ಲಿ ರೇಖಾ ಸೌದಿ ನಾಡಗೀತೆ ನಡೆಸಿಕೊಟ್ಟರು. ಶಿಲ್ಪಾ ಮಜಗೆ ಸ್ವಾಗತಿಸಿದರು. ರೂಪಾ ಮರೂರ ಕಾರ್ಯಕ್ರಮ ನಿರೂಪಿಸಿದರು. ಶಾಂತಮ್ಮ ಬಲ್ಲೂರ್ ವಂದಿಸಿದರು.