ಸಾಹಿತ್ಯ ರಚನೆಯಿಂದ ಸಮೃದ್ಧ ಸಮಾಜದ ನಿರ್ಮಾಣ : ಹೆಬ್ಬಾಳೆ

ಬೀದರ:ಜ.13: ಅಕ್ಷರಗಳನ್ನು ಮುತ್ತಿನಂತೆ ಪೋಣಿಸಿ ತಮ್ಮ ಅನುಭವದಿಂದ ರಚಿಸುವ ಕಾವ್ಯವು ವ್ಯಕ್ತಿಗೆ ಸಂಸ್ಕಾರಯುತ ಬದುಕು ಸಾಗಿಸಲು ಸಹಕಾರಿಯಾಗುತ್ತದೆ. ಹೊಸ ಹೊಸ ಚಿಂತನೆಗಳಿಗೆ ಒಡ್ಡುತ್ತದೆ. ವ್ಯಕ್ತಿಯನ್ನು ಭಾವನಾಲೋಕಕ್ಕೆ ಕೊಂಡೊಯ್ಯಲು ಪ್ರೇರಣೆಯಾಗುತ್ತದೆ. ಇಂದಿನ ಮೊಬೈಲ್ ಹಾವಳಿಯಲ್ಲಿ ಯುವಕರು ಸಾಹಿತ್ಯದಿಂದ ದೂರ ಸರಿಯುತ್ತಿರುವುದು ಕಳವಳಕಾರಿ ಸಂಗತಿ. ಅವರನ್ನು ಮತ್ತೆ ಗ್ರಂಥಾಲಯ, ಸಾಹಿತ್ಯ ವೇದಿಕೆ ಹಾಗೂ ಕವಿತೆ ರಚನೆ ಕಡೆಗೆ ಕೊಂಡೊಯ್ಯಲು ಇಂತಹ ಕಾರ್ಯಕ್ರಮಗಳು ಸ್ಫೂರ್ತಿ ಎಂದು ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗದಿಗೆಪ್ಪ ಎಸ್. ನುಡಿದರು.

ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಚೇರಿ ಬೆಂಗಳೂರು, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಬೀದರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ನಡೆದ ಸಾಹಿತ್ಯ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕಿ ಅಂಬಿಕಾ ಸಾವಂತ ಅವರು ಮಾತನಾಡಿ “ಸಾಹಿತ್ಯ ಸಂಸ್ಕøತಿ ಪ್ರತಿ ವಿದ್ಯಾರ್ಥಿಗಳಿಗೂ ತಲುಪಬೇಕೆಂಬ ಉದ್ದೇಶದಿಂದ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘವು ಇಂದು ನಮ್ಮ ವಸತಿ ನಿಲಯದಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯ. ಇದೇ ರೀತಿ ಪ್ರತೀ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಸಾಹಿತ್ಯ ರಚನೆಗೆ ಯುವಕ-ಯುವತಿಯರನ್ನು ಪ್ರೋತ್ಸಾಹಿಸಬೇಕು. ಯುವಕರು ಕೂಡಾ ಇಂದಿನ ವಾಸ್ತವ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಾಹಿತ್ಯ ರಚನೆ ಮಾಡಿದಾಗ ಮಾತ್ರ ಕವಿತೆಗಳು ಜನರ ಹೃದಯಗಳಿಗೆ ಮುಟ್ಟಲು ಸಾಧ್ಯವಾಗುತ್ತದೆ. ಸತತ ಅಧ್ಯಯನ, ಹಿರಿಯ ಕವಿಗಳ ಪುಸ್ತಕಾಧ್ಯಯನ, ಮಾಡಿದಾಗ ಕವನ ರಚಿಸಲು ಇನ್ನೂ ಸುಲಭವಾಗುತ್ತದೆ” ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ “ಇಂದಿನ ಕೆಲವು ಬೋಧಕರು ಮಾತೃಭಾಷಾ ಬೋಧನೆ ಕಂಡರೆ ಮೂಗು ಮುರಿಯುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ. ಮಕ್ಕಳು ಬೇರೆ ವಿಷಯಗಳನ್ನು ಅಭ್ಯಾಸ ಮಾಡಿ. ಆದರೆ ಭಾಷಾ ಕೌಶಲ್ಯ ತಪ್ಪದೇ ಬೆಳೆಸಿಕೊಳ್ಳಬೇಕು. ಭಾಷಾ ಕೌಶಲ್ಯದ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ಕವಿಯಾದವರಿಗೆ ಶಬ್ದಭಂಡಾರದ ಅವಶ್ಯಕತೆ ಇರುತ್ತದೆ. ಸಾಹಿತ್ಯ ರಚನೆಯಿಂದ ಸಾಕಷ್ಟು ಲಾಭಗಳಿವೆ. ಹಿಂದೆ ಕವಿಯಾದವರಿಗೆ ಅರಸರು ಸಾಹಿತ್ಯ ರಚನೆಗೆ ಮುತ್ತುರತ್ನಗಳನ್ನ ಕಾಣಿಕೆಯಾಗಿ ನೀಡುತ್ತಿದ್ದರು. ಇಂದಿನ ಸರ್ಕಾರಗಳು ಗಟ್ಟಿ ಸಾಹಿತ್ಯ ರಚನೆಯಿಂದ ಜ್ಞಾನಪೀಠ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಹಾಗೂ ನಗದು ಹಣ, ಪ್ರಶಸ್ತಿ ಫಲಕ ನೀಡಿ ಗೌರವಿಸುತ್ತಿದೆ. ಸಾಹಿತ್ಯ ರಚನೆಯಿಂದ ಪ್ರಸಿದ್ಧಿ ಪಡೆದುಕೊಳ್ಳಬಹುದು. ಪುಸ್ತಕ ಪ್ರಕಟಣೆಯಿಂದ ಸರ್ಕಾರ ಕವಿಯ ಪುಸ್ತಕ ಖರೀದಿಸಿ ಪ್ರೋತ್ಸಾಹಿಸುತ್ತಿದೆ. ಹೀಗಾಗಿ ಮಕ್ಕಳು ಸಾಹಿತ್ಯ ರಚನೆ ಕಡೆಗೆ ಹೆಚ್ಚು ಒಲವು ತೋರಿಸಬೇಕು. ಕವಿತೆಗಳ ರಚನೆಯಿಂದ ಕುಟುಂಬದಲ್ಲಿರುವ ವೈಮನಸ್ಸು ದೂರವಾಗಿ ಪರಸ್ಪರ ಗೌರವ, ಪ್ರೀತಿ, ವಿಶ್ವಾಸ ಮತ್ತು ಸಾಮರಸ್ಯ ಬೆಳೆಯುತ್ತದೆ. ಸಮಾಜದಲ್ಲಿ ಬಾಂಧವ್ಯ ನೆಲೆಸಿ ಸಮೃದ್ಧಿಯ ಸಮಾಜಕ್ಕೆ ನಾಂದಿ ಹಾಡುತ್ತದೆ ಎಂದು ತಿಳಿಸಿದರು. ಕೊನೆಯಲ್ಲಿ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಗ್ರಂಥಾಲಯಕ್ಕೆ ಸಾವಿರಾರು ರೂಪಾಯಿ ಬೆಲೆಯ ಪುಸ್ತಕಗಳನ್ನು ಸಂಘದ ವತಿಯಿಂದ ನೀಡಲಾಯಿತು.

ಕರ್ನಾಟಕ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಮಹಾನಂದ ಮಡಕಿ ಪ್ರಾಸ್ತಾವಿಕ ಮಾತನಾಡಿದರು. ಶರಣಯ್ಯ ಸ್ವಾಮಿ ಪ್ರಾರ್ಥಿಸಿದರು. ಕಿರಣ ವಲ್ಲೇಪುರೆ ನಿರೂಪಿಸಿದರು. ಕ.ಬ.ಕ.ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರು. ಕಾರ್ಯಕ್ರಮದ ಸದಸ್ಯ ಸಂಚಾಲಕ ಡಾ. ರಾಜಕುಮಾರ ಹೆಬ್ಬಾಳೆ ವಂದಿಸಿದರು.

ಕವಿಗೋಷ್ಠಿ: ಕವಿಗೋಷ್ಠಿಯಲ್ಲಿ ವಿವಿಧ ಕವಿಗಳು ವಾಸ್ತವಿಕತೆಯ ಮೇಲೆ ಬೆಳಕು ಚೆಲ್ಲಿದರು. ಭೂಮಿ ತೂಕ, ತಾಯಿಯ ಮಹತ್ವ, ಶಿಕ್ಷಣದ ಅವಶ್ಯಕತೆ, ಆರೋಗ್ಯ ಮತ್ತು ವಾತಾವರಣ, ಕೋಮುವಾದ, ಮೊಬೈಲ್ ಬಳಕೆ, ಭಾವಗಳ ಸ್ಪಂದನೆ, ಮನಸ್ಸಿನ ತೊಳಲಾಟ, ಬದುಕಿನ ಜಂಜಾಟ, ಅಪ್ಪನ ತ್ಯಾಗ ಮತ್ತು ಪರಿಶ್ರಮ ಹೀಗೆ ಹಲವಾರು ವಿಷಯಗಳ ಕುರಿತು ಕವನ ವಾಚನ ಮಾಡಿದರು. ಡಾ. ಅಶೋಕ ಕೋರೆ, ಶೈಲಜಾ ಹುಡಗೆ, ಡಾ. ಮಹಾದೇವಿ ಕಪಲಾಪುರೆ, ಡಾ. ಶಿರಾಜೋದ್ದಿನ್, ಡಾ. ಸುನಿತಾ ಕೂಡ್ಲಿಕರ್, ಶಾಂತಮ್ಮ ಬಲ್ಲೂರ, ಪ್ರಿಯಂಕಾ ಶಂಕರ, ಶ್ರೀಮತಿ ಶಿಭಾ, ಶ್ರೀಮತಿ ರೀಟಾ, ಎಸ್.ಬಿ.ಕುಚಬಾಳ ಕವನ ವಾಚನ ಮಾಡಿದರು.