ಸಾಹಿತ್ಯ ಭವನದ ಜಾಗೆ ಅತಿಕ್ರಮಣ ತೆರವಿಗೆ ಒತ್ತಾಯ : ಮುಖ್ಯಾಧಿಕಾರಿ ಸ್ಪಂದನೆ

ಲಿಂಗಸುಗೂರು.ಜ.14-ಸ್ಥಳೀಯ ಗುಡದನಾಳ ರಸ್ತೆಯಲ್ಲಿರುವ ಕನ್ನಡ ಸಾಹಿತ್ಯ ಭವನದ ಜಾಗೆಯನ್ನು ಅಕ್ಕಪಕ್ಕದವರು ಒತ್ತುವರಿ ಮಾಡಿಕೊಂಡಿದ್ದು ಸ್ಥಳ ಪರಿಶೀಲನೆ ಮಾಡಿ ಅತಿಕ್ರಮಣ ತೆರವುಗೊಳಿಸಬೇಕೆಂದು ಕಸಾಪ ಪದಾಧಿಕಾರಿಗಳು ಒತ್ತಾಯಿಸಿದರು.
ಮುಖ್ಯಾಧಿಕಾರಿ ವಿಜಯಲಕ್ಷ್ಮಿಯವರಿಗೆ ಮನವಿ ಸಲ್ಲಿಸಿದ ಅವರು, ೨೦೧೨ರಲ್ಲಿ ಪುರಸಭೆ ವತಿಯಿಂದ ಪುರಪಂಚಾಯತ್ ಅನುದಾನದಲ್ಲಿ ಸಾಹಿತ್ಯ ಭವನ ನಿರ್ಮಾಣ ಮಾಡಿಕೊಡಲಾಗಿತ್ತು. ಸಾಹಿತ್ಯ ಭವನದ ಸುತ್ತ ಕಂಪೌಂಡ್ ನಿರ್ಮಾಣ ಮಾಡಿಕೊಳ್ಳಲು ಅಂದಿನ ಮುಖ್ಯಾಧಿಕಾರಿ ಈರಣ್ಣ ಬಿರಾದಾರ ಅವರು ಸ್ಥಳ ಗುರುತು ಮಾಡಿಕೊಟ್ಟಿದ್ದರು. ಆದರೆ, ಇತ್ತೀಚೆಗೆ ಕೆಲವರು ಸಾಹಿತ್ಯ ಭವನದ ಜಾಗೆಯನ್ನು ಅತಿಕ್ರಮಣ ಮಾಡಿಕೊಂಡಿದ್ದು, ಸಾಹಿತ್ಯ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಸ್ಥಳ ಪರಿಶೀಲನೆ ಮಾಡಿ ಒತ್ತುವರಿ ಮಾಡಿಕೊಂಡಿರುವ ಜಾಗೆಯನ್ನು ಸಾಹಿತ್ಯ ಭವನಕ್ಕೆ ಬಿಟ್ಟುಕೊಡಿಸಿ ಕಂಪೌಂಡ್ ನಿರ್ಮಾಣಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಮುಖ್ಯಾಧಿಕಾರಿ ಸ್ಪಂಧನೆ
ಸಾಹಿತಿಗಳ ಮನವಿಗೆ ಸ್ಪಂಧಿಸಿದ ಮುಖ್ಯಾಧಿಕಾರಿ ವಿಜಯಲಕ್ಷ್ಮಿ, ಸಾಹಿತ್ಯ ಭವನದ ದಾಖಲೆಗಳನ್ನು ಪರಿಶೀಲಿಸಿ ಸ್ಥಳ ಪರಿಶೀಲನೆಗೆ ಬರುವುದಾಗಿ ಹೇಳಿದರು. ಅಲ್ಲದೇ, ದಾಖಲೆಗಳಲ್ಲಿ ಇದ್ದಷ್ಟು ಜಾಗೆಯಲ್ಲಿ ಅತಿಕ್ರಮಣ ಮಾಡಿರುವುದು ಕಂಡುಬಂದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಸಾಪ ಅದ್ಯಕ್ಷ ಪ್ರೊ.ಜಿ.ವಿ.ಕೆಂಚನಗುಡ್ಡ, ಪ್ರದಾನ ಕಾರ್ಯದರ್ಶಿ ದುರ್ಗಾಸಿಂಗ್ ರಜಪೂತ್, ಪದಾಧಿಕಾರಿಗಳಾದ ಮಂಜುನಾಥ ಕಾಮಿನ್, ಡಾ.ಶಶಿಕಾಂತ ಕಾಡ್ಲೂರು, ವೈ.ಬಸವರಾಜ, ವೈವೈ ಈಳಿಗೇರ್ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.