ಸಾಹಿತ್ಯ ಪರಿಷತ್ತಿನಲ್ಲಿ ಮಹಿಳೆಗೆ ಅವಕಾಶ ನೀಡಿ: ಚಿಮ್ಮಲಗಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.17: ಕನ್ನಡ ಸಾಹಿತ್ಯ ಪರಿಷತ್‌ ನ  106 ವರ್ಷಗಳ ಇತಿಹಾಸದಲ್ಲಿ  ಈವರೆಗೆ  ಮಹಿಳೆಯರು ಅಧ್ಯಕ್ಷರಾಗಿಲ್ಲ.
ನಾನು ಈ ಬಾರಿ ಸ್ಪರ್ಧೆ ಮಾಡಿದ್ದು  ಮಹಿಳೆಯನ್ನು ಆಯ್ಕೆ ಮಾಡುವ ಅವಕಾಶ ಸದಸ್ಯರಿಗೆ ದೊರಕಿದೆ ಎಂದು ಕಸಾಪ ಚುನಾವಣೆಯ ರಾಜ್ಯಧ್ಯಕ್ಷ ಸ್ಥಾನದ ಅಭ್ಯರ್ಥಿ  ಡಾ. ಸರಸ್ವತಿ ಚಿಮ್ಮಲಗಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಿನ್ನೆ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಬಸವಾದಿ ಶರಣರು ಅನುಭವ ಮಂಟಪದಲ್ಲಿ ಮಹಿಳೆಗೆ ಸ್ಥಾನ ಕಲ್ಪಿಸಿ ಸ್ತ್ರೀ ಕುಲವನ್ನು ಎತ್ತಿಹಿಡಿದಿದ್ದಾರೆ ಇಂತಹ ನಾಡಿನಲ್ಲಿ ಮಹಿಳೆಗೆ ಕಸಾಪದಲ್ಲೂ ಆಧ್ಯತೆ ನೀಡಬೇಕೆಂದರು.‌
 ನನ್ನ ಗೆಲ್ಲಿಸಿದರೆ:
ಈ ಬಾರಿಯ ಕಸಾಪ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಕನ್ನಡ ನಾಡು, ನುಡಿ, ಜಲ ನೆಲ, ಗಡಿ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಕಾಳಜಿವಹಿಸುವುದು, ಎಲ್ಲಾ ಹಂತಗಳಲ್ಲಿ ಮಹಿಲೆಯರಿಗೆ ಸಮಾನ ಆದ್ಯತೆ ನೀಡುವುದು, ರಾಜ್ಯ ಮಟ್ಟದಿಂದ ಹಳ್ಳಿಯ ವರೆಗೆ ಸಾಹಿತ್ಯ ಸರಸ್ವತಿಯು ಕೊಂಡೊ ಯ್ಯುವುದು, ಕೆಲವು ಮಹತ್ವದ ತಿದ್ದುಪಡಿ ತರುವುದು, ಗಡಿ ನಾಡು ಸಮ್ಮೇಳನವನ್ನು ಆಯೋಜಿಸುವುದು ಈ ಎಲ್ಲಾ ಕಾರ್ಯಗಳು ಮಾಡಲು ನನಗೆ ಒಂದು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಅಂಬೇಡ್ಕರ್ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ಕಿತ್ತೂರು ಚನ್ನಮ್ಮ ಪ್ರಶಸ್ತಿ ಹಾಗೂ ರಾಜ್ಯ ರಾಷ್ಟ್ರ, ಅಂತರಾಷ್ಟ್ರೀಯ 35 ಪ್ರಶಸ್ತಿಗಳು ಲಭಿಸಿವೆ.
ಮುಳ್ಳುಬೆಲಿ, ಎಡಬಿಡಂಗಿ ದೇವನ ವಚನಗಳು, ಬಾಳು ಕೊಡವ್ವ ಕೋಡಿಲ್ಲಿದ ಕೋಡಗ, ಪ್ರಬಂಧಮಾಲಿಕೆ ಹೀಗೆ 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವುದಾಗಿ‌ ಹೇಳಿದರು.
ಚುನಾವಣೆಯಲ್ಲಿ ಕೆಲವರು ತಮ್ಮ ಹುಟ್ಟಿನೊಂದಿಗೆ ಶ್ರೇಷ್ಠ ಸಂತರನ್ನು ಬೆಸೆಯುತ್ತಾ, ಅಡಿಯಿಂದ ಮುಡಿಯವರೆಗೆ ಡುಪ್ಲಿಕೇಟ್ ಅಹಮಿಕೆಯಿಂದ ಮತದಾರರನ್ನು ದಾರಿತಪಿಸುತ್ತಿದ್ದಾರೆ. ಅದರಂತೆ ಕೆಲವರು ಹಣ, ಸೂಟ್ ಕೇಸ್, ಬೆಳ್ಳಿಯ ಅರಿಶಿಣ, ಕುಂಕುಮ ಬಟ್ಟಲು, ಬೆಳ್ಳಿಯ ಉಂಗುರ, ಇದೆಲ್ಲಾ ಮತದಾರರಿಗೆ ಹಂಚಿ ಪ್ರಜ್ಞಾವಂತ ಹಾಗೂ ಪ್ರಾಮಾಣಿಕ ಮತದಾರರನ್ನು ದಾರಿತಪ್ಪಿಸುತ್ತಿದ್ದಾರೆಂದು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಗನಕಲ್ಲು ಕೃಷ್ಣ ಮೊದಲಾದವರು ಇದ್ದರು.