ಸಾಹಿತ್ಯ ಪರಿಷತ್ತಿಗೆ ನೂತನ ತಂತ್ರಜ್ಞಾನದ ಲೇಪ ಹಚ್ಚುವಂತಾಗಬೇಕು

ವಿಜಯಪುರ.ನ೧೧:ತಂತ್ರಜ್ಞಾನದಲ್ಲಿ ಸಾಕಷ್ಟು ಅವಿಷ್ಕಾರಗಳು ಆಗುತ್ತಿದ್ದು, ಸದಸ್ಯತ್ವ ನೀಡುವಲ್ಲಿ, ನೂತನ ಪುಸ್ತಕಗಳ ರಚನೆಯನ್ನು ಅಂತರ್ಜಾಲಕ್ಕೆ ವರ್ಗಾಯಿಸುವಲ್ಲಿ ಹಾಗೂ ಆನ್‌ಲೈನ್ ಮೂಲಕ ಪುಸ್ತಕಗಳನ್ನು ಮಾರಾಟ ಮಾಡುವಂತಹ ಹೊಸ-ಹೊಸ ತಂತ್ರಜ್ಞಾನಗಳನ್ನು ಸಾಹಿತ್ಯ ಪರಿಷತ್ ಅಳವಡಿಸಿಕೊಳ್ಳುವಂತಾಗಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ವ.ಚ.ಚನ್ನೇಗೌಡ ತಿಳಿಸಿದರು.
ಅವರು ಇಲ್ಲಿನ ರಾಯಲ್ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರದಂದು ಸಾಹಿತ್ಯ ಪರಿಷತ್ತಿನ ಕವಿಗಳು, ಸಾಹಿತಿಗಳೊಂದಿಗೆ ಸಮಾಲೋಚನಾ ಕಾರ್ಯಕ್ರಮದಲ್ಲಿ ಮಾತನಾಡಿ,ನಿಕಟ ಪೂರ್ವ ಕಸಾಪ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದು, ರಾಜ್ಯ ಸಾರಿಗೆ ಸಂಸ್ಥೆಯ ಕ್ರಿಯಾ ಸಮಿತಿಯಲ್ಲಿಯೂ ಕಾರ್ಯದರ್ಶಿಯಾಗಿದ್ದು, ಹಲವಾರು ಕೃತಿಗಳನ್ನು ರಚಿಸಿರುವ ತಾವು ರಾಜ್ಯ ಕಸಾಪವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರು ಹೆಗ್ಗಳಿಕೆಯೊಂದಿಗೆ ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡುವುದೇ ನಮ್ಮ ಆಶಯವಾಗಿದೆ ಎಂದು ತಿಳಿಸಿದರು.
೭ ಕೋಟಿಗೂ ಹೆಚ್ಚು ಕನ್ನಡಿಗರಿರುವ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆ ಕೇವಲ ೩.೫ ಲಕ್ಷವಿದ್ದು, ಆನ್‌ಲೈನ್ ಮೂಲಕ ಸದಸ್ಯತ್ವವನ್ನು ನೀಡುವುದರಿಂದ ಇನ್ನೂ ಹೆಚ್ಚಿನ ಸದಸ್ಯರನ್ನು ಸೇರಿಸಲು ಸಾಧ್ಯವಾಗುವುದೆಂದು ತಿಳಿಸಿದರು. ಹಿರಿಯ ಚುಟುಕು ಕವಿಗಳಾದ ಜರಗನಹಳ್ಳಿ ಶಿವಶಂಕರ್‌ರವರು ಮಾತನಾಡಿ, ಇಂದಿನ ತಂತ್ರಜ್ಞಾನಕ್ಕೆ ತಕ್ಕಂತೆ ಕನ್ನಡ ಸಾಹಿತ್ಯವನ್ನು ಕನ್ನಡಿಗರಿಗೆ ತಲುಪಿಸುವಂತಹ ಆಲೋಚನೆ ಉಳ್ಳ ವ್ಯಕ್ತಿಯನ್ನು ಬೆಂಬಲಿಸುವಂತಾಗಬೇಕೆಂದು, ತಿಳಿಸಿದರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಬಿ.ಹಡಪದ್ ಮಾತನಾಡಿ, ಕನ್ನಡದ ನೆಲ ನೀರು, ಮುಂತಾಗಿ ಸಕಲ ಸೌಲಭ್ಯಗಳನ್ನು ಪಡೆದುಕೊಂಡು ಕನ್ನಡಿಗರಿಗೆ ಕೆಲಸ ನೀಡದಂತಹ ಉದ್ದಿಮೆಗಳ ವಿರುದ್ದ ಹೋರಾಡಿ, ಸರಕಾರದ ನೀತಿ ಬದಲಾಯಿಸಿ, ಕನ್ನಡಿಗರಿಗೆ ಉದ್ಯೋಗ ಕೊಡಿಸುವಂತಹ ಹೋರಾಟಗಾರರಿಗೆ ಬೆಂಬಲ ನೀಡುವಂತಾಗಬೇಕೆಂದು ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಬಿ.ಹಡಪದ್, ಕರ್ನಾಟಕ ಕನ್ನಡ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಡಾ.ಕನ್ನಡ ಆಂಜನಪ್ಪರವರುಗಳು ಹಿರಿಯ ಕವಿ ಜರಗನಹಳ್ಳಿ ಶಿವಶಂಕರ್ ಹಾಗೂ ವ.ಚ.ಚನ್ನೇಗೌಡರವರನ್ನು ಶಾಲು ಹೊದಿಸಿ, ಸನ್ಮಾನಿಸಿದರು.
ತಾಲೂಕು ಕಸಾಪ ಮಾಜಿ ಅಧ್ಯಕ್ಷ ವಿ.ಎನ್.ರಮೇಶ್, ಎಂ.ನಾರಾಯಣಸ್ವಾಮಿ, ಕಾರ್ಯದರ್ಶಿ ಆರ್.ಮುನಿರಾಜು, ಜಿಲ್ಲಾ ಕಾರ್ಯದರ್ಶಿ ಎಂ.ಶಿವಕುಮಾರ್, ಟೌನ್ ಕಸಾಪ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ, ಕಾರ್ಯದರ್ಶಿ ಎನ್.ಸಿ.ಮುನಿವೆಂಕಟರಮಣ, ಕೆ.ಮುರಳೀಧರ್, ಜಿಲ್ಲಾ ಕಾರ್ಮಿಕ ಘಟಕದ ಕಸಾಪ ಅಧ್ಯಕ್ಷ ಕೆ.ಎಂ.ಚೌಡೇಗೌಡ, ಕಾರ್ಯದರ್ಶಿ ಕೆ.ವಿ.ಶ್ರೀಕಾಂತ್ ಮತ್ತಿತರರು ಇದ್ದರು.