ಸಾಹಿತ್ಯ ಪರಂಪರೆಗೆ ಮುನ್ನುಡಿ ಬರೆದ ಮಹರ್ಷಿ ವಾಲ್ಮೀಕಿ : ಶಾಸಕ ಸಿ. ಪುಟ್ಟರಂಗಶೆಟ್ಟಿ

????????????????????????????????????

ಚಾಮರಾಜನಗರ, ನ.01:- ರಾಮಾಯಣದಂತಹ ಮಹಾಕಾವ್ಯವನ್ನು ರಚಿಸುವ ಮೂಲಕ ಸಾಹಿತ್ಯ ಪರಂಪರೆಗೆ ಮುನ್ನುಡಿ ಬರೆದವರು ಮಹರ್ಷಿ ವಾಲ್ಮೀಕಿ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ ಹಾಗೂ ಪರಿಶಿಷ್ಟ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಕೋವಿಡ್-19 ಹಿನ್ನೆಲೆಯಲ್ಲಿ ಸರಳವಾಗಿ ಅಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಜಗತ್ತಿನ ಎರಡು ಮಹಾಕಾವ್ಯಗಳಲ್ಲಿ ವಾಲ್ಮೀಕಿಯವರು ರಚಿಸಿದ ರಾಮಾಯಣವು ಒಂದಾಗಿದೆ. ಅದರಲ್ಲಿನ ರಾಮರಾಜ್ಯದ ಪರಿಕಲ್ಪನೆ ವಿಶಿಷ್ಟವಾಗಿದ್ದು, ಪ್ರಜಾಪಭುತ್ವದ ಮಹತ್ವವನ್ನು ಅಂದಿನ ಕಾಲದಲ್ಲಿಯೇ ಶ್ರೀರಾಮನು ಮನಗಂಡಿದ್ದನು. ವಾಲ್ಮೀಕಿಯವರು ರಾಮಾಯಣದಲ್ಲಿ ಹಲವಾರು ಆದರ್ಶ ಮೌಲ್ಯ ಹಾಗೂ ನೀತಿಗಳನ್ನು ವಿವಿಧ ಪಾತ್ರ, ಸನ್ನಿವೇಶಗಳ ಮೂಲಕ ನೀಡಿ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದಾರೆ ಎಂದರು.
ಮಹಾಪುರುಷರ, ಸಂತರ ಜಯಂತಿಗಳು ಯಾವುದೇ ಸಮಾಜಕ್ಕೆ ಸೀಮಿತಗೊಳ್ಳದೇ ಎಲ್ಲರೂ ಆಚರಿಸಿ, ಭಾಗವಹಿಸುವಂತಾಗಬೇಕು. ಮೂಲತ: ಬೇಡನಾಗಿದ್ದ ಸಾಮಾನ್ಯ ವ್ಯಕ್ತಿ ಮಹರ್ಷಿ ವಾಲ್ಮೀಕಿಯಾದದ್ದು ಸತತ ಪರಿಶ್ರಮದಿಂದ. ರಾಮಾಯಣ, ಮಹಾಭಾರತಗಳನ್ನು ಪ್ರತಿಯೊಬ್ಬರು ಒದುವ ಮೂಲಕ ಅವುಗಳಲ್ಲಿರುವ ಮೌಲ್ಯಯುತ ಜೀವನ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಎಂ. ಅಶ್ವಿನಿ ಮಾತನಾಡಿ, ಹುತ್ತದಲ್ಲಿ ಹುದುಗಿ ಜ್ಞಾನಿಯಾಗಿ ಹೊರಬಂದ ಮಹರ್ಷಿ ವಾಲ್ಮೀಕಿಯವರು ಋಷಿವೃಂದದಲ್ಲೇ ಬಹಳ ಶ್ರೇಷ್ಠರು. ಎಲ್ಲರೂ ಸಹ ಮಾಡುವ ವೃತ್ತಿಯಿಂದಲೇ ಶ್ರೇಷ್ಠರಾಗುತ್ತಾರೆಂದು ಪ್ರತಿಪಾದಿಸಿದ ವಾಲ್ಮೀಕಿಯವರ ಚಿಂತನೆಗಳನ್ನು ನಾವೆಲ್ಲರೂ ಮನಗಾಣಬೇಕು ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಶಶಿಕಲಾ ಅವರು ಮಾತನಾಡಿ ಮಹರ್ಷಿ ವಾಲ್ಮೀಕಿಯವರು ರಾಮಾಯಣ ಮಹಾಗ್ರಂಥದಲ್ಲಿ 24 ಸಾವಿರ ಶ್ಲೋಕಗಳನ್ನು ರಚಿಸಿದ್ದಾರೆ. ಅದರಲ್ಲಿರುವ ಆದರ್ಶ ಜೀವನ ಸಂದೇಶಗಳು ಸಮುದಾಯದ ಅಭಿವೃದ್ಧಿಗೆ ವಾಲ್ಮೀಕಿಯವರು ನೀಡಿರುವ ಕೊಡುಗೆಯಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಮಾತನಾಡಿ, ಜಗತ್ತಿನ ಸಾಂಸ್ಕøತಿಕ ಪರಂಪರೆಯಲ್ಲಿ ರಾಮಾಯಣ ಹಾಗೂ ಮಹಾಭಾರತ ಎರಡೂ ಕೂಡ ಶ್ರೇಷ್ಠ ಮಹಾಕಾವ್ಯಗಳಾಗಿವೆ. ನಮ್ಮಲ್ಲಿ ಕಾವ್ಯ ರಚನೆಯ ದೊಡ್ಡ ಪರಂಪರೆಯೇ ಇದೆ. ಸಂಸ್ಖøತಿ ಹಾಗೂ ನಾಗರೀಕತೆ ಇದರ ಹಿಂದೆ ಕೆಲಸ ಮಾಡಿವೆ. ರಾಮಾಯಣ, ಮಹಾಭಾರತ ಎರಡರಲ್ಲೂ ಒಂದೇ ಸಾಮ್ಯತೆಯಿದೆ. ಅಲ್ಲಿನ ಸಾರ್ವಕಾಲೀಕ ಸತ್ಯವನ್ನು ನಾವು ಅರಿಯಬೇಕು ಎಂದರು.
ಮಹರ್ಷಿ ವಾಲ್ಮೀಕಿಯವರನ್ನು ಸಾಂಸ್ಕøತಿಕವಾಗಿ ಪರಿಗಣಿಸಬಹುದು. ಇಡೀ ವಿಶ್ವವೇ ಒಪ್ಪುವಂತಹ ಸಂತರು ನಮ್ಮ ದೇಶದಲ್ಲಿ ಹುಟ್ಟಿದ್ದಾರೆ. ಆದರೆ ನಾವು ಅವರುಗಳ ತತ್ವ ಸಿದ್ದಾಂತ, ಚಿಂತನೆಗಳನ್ನು ಅಳವಡಿಸಿಕೊಳ್ಳದೇ ಅಗೌರವ ತೋರುತ್ತಿದ್ದೇವೆ. ಇದು ನಿಜಕ್ಕೂ ಆತಂಕಕಾರಿಯಾಗಿದೆ. ಅವರ ನಾವೆಲ್ಲರೂ ಅನುಸರಿಸಬೇಕು. ಜಿಲ್ಲೆಯಲ್ಲಿ ಶೇ. 32ರಷ್ಟು ಅನಕ್ಷರಸ್ಥರಿದ್ದಾರೆ. ಶಿಕ್ಷಣ, ಸಮಾನತೆ, ಉದ್ಯೋಗ ಎಲ್ಲರಿಗೂ ನೈತಿಕವಾಗಿ ದೊರೆಯುತ್ತಿಲ್ಲ. ಶೈಕ್ಷಣಿಕವಾಗಿ ಸಮುದಾಯವನ್ನು ಮೇಲೆತ್ತಬೇಕು. ಬಡತನ, ಅನಕ್ಷರತೆ ಇವೆಲ್ಲವನ್ನು ಸಮುದಾಯ ಮೆಟ್ಟಿ ನಿಲ್ಲಬೇಕು. ಆಗಮಾತ್ರ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಮೇಶ್, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಶೋಭಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ಧಣ್ಣನವರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗಿರೀಶ್, ಸಮುದಾಯದ ಮುಖಂಡರಾದ ಸುರೇಶ್‍ನಾಯಕ್, ಚಂದಕವಾಡಿ ಕಪನಿನಾಯಕ, ಚಂಗುಮಣಿ, ಪರಶಿವಮೂರ್ತಿ, ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾ ವಾಲ್ಮೀಕಿ ಕಲಾಬಳಗದ ಅಧ್ಯಕ್ಷರಾದ ಜಿ. ಬಂಗಾರು, ಜಿಲ್ಲಾಮಟ್ಟದ ಅಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಹರದನಹಳ್ಳಿ ಸುರೇಶ್‍ನಾಗ್ ಅವರು ರಾಮನ ಅವತಾರ, ರಘುಕುಲ ಸೋಮನ ಅವತಾರ ಗೀತೆಯನ್ನು ಪ್ರಸ್ತುತಪಡಿಸುವ ಮೂಲಕ ಗಮನ ಸೆಳೆದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಂತೇಮರಹಳ್ಳಿಯ ಕುಮಾರಿ ರೂಪಶ್ರೀ ಅವರಿಗೆ ಸಮುದಾಯದ ವತಿಯಿಂದ ರೂ. ಒಂದು ಲಕ್ಷ ರೂ.ಗಳ ಚೆಕ್ ವಿತರಿಸಲಾಯಿತು.