ಸಾಹಿತ್ಯ ಧರ್ಮ- ಜಾತಿ- ಸಮುದಾಯಕ್ಕೆ ಸೀಮಿತವಾಗದಿರಲಿ

ದಾವಣಗೆರೆ.ಜು.೧೭: ಸಾಹಿತಿ, ಕವಿ ಮತ್ತು ಸಾಹಿತ್ಯವನ್ನು ಧರ್ಮ, ಜಾತಿ, ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ಸಾಹಿತಿ ಡಾ. ಆನಂದ ಋಗ್ವೇದಿ ತಿಳಿಸಿದರು. ನಿರ್ವರ್ಣ ಸಭಾಂಗಣದಲ್ಲಿ ನಡೆದ ಸಂತೇಬೆನ್ನೂರು ಫೈಜ್ನಟ್ರಾಜ್ ಅವರ ಸಾಹಿತ್ಯ ಕೃತಿಗಳ ಅವಲೋಕನ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈಚೆಗೆ ಕೃತಿಕಾರ ರನ್ನು ಜಾತಿ, ಸಮುದಾಯ, ಧರ್ಮಕ್ಕೆ ಸೀಮಿತಗೊಳಿಸುವ ಕೆಲಸ ಕಂಡು ಬರುತ್ತಿದೆ. ಸಾಹಿತಿಗಳನ್ನು ನಮ್ಮವರು ಎಂದು ಧರ್ಮ, ಸಮುದಾಯದ ಪ್ರತೀಕ ಎಂದು ಸಂಘರ್ಷಮಯ ವಾತಾವರಣ ಕಂಡು ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಸಂತೇಬೆನ್ನೂರು ಫೈಜ್ನಟ್ರಾಜ್ ನಾಲ್ಕು ದಶಕಗಳಲ್ಲಿ ಅನೇಕ ಸಂಕಷ್ಟ ಮತ್ತು ಸಂಘರ್ಷ ದಾಟಿ ಬಂದಿದ್ದು, ಕನ್ನಡ ಸಾಹಿತ್ಯ ಲೋಕಕ್ಕೆ ಒಂಭತ್ತು ಕೃತಿಗಳ ನೀಡಿದ್ದಾರೆ ಎಂದು ತಿಳಿಸಿದರು.ಸಂತೇಬೆನ್ನೂರು ಫೈಜ್ನಟ್ರಾಜ್ ಅವರ ಕೇಳದೆ ನಿಮಗಾಗಿ ಕವನ ಸಂಕಲನಕ್ಕೆ ಮುಸ್ಲಿಂ ಸಾಹಿತ್ಯ ಪರಿಷತ್ತು ಪ್ರಶಸ್ತಿಯನ್ನು ನೀಡಿದೆ. ಅದಕ್ಕೆ ಮುಜುಗರ ಪಡುವಂತದ್ದಲ್ಲ. ಸಾಹಿತಿ, ಕವಿತೆಗೆ ಪ್ರಶಸ್ತಿ ಬರುವುದು ಅವರಿಗೆ ಆತ್ಮಬಲ ನೀಡುತ್ತದೆ ಎಂದು ತಿಳಿಸಿದರು.ಡಾ. ಮಲ್ಲಿಕಾರ್ಜುನ ತೂಲಹಳ್ಳಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೇದಿಕೆ ಮತ್ತು ಆಪ್ತತೆ ಕಳೆದು ಹೋಗುತ್ತಿದೆ. ಆತ್ಮರತಿ, ಗುಂಪುಗಾರಿಕೆಯ ವಾತಾವರಣ ದ ನಡುವೆ ಆಪ್ತತೆಯ ವಲಯ ಸ್ಥಾಪನೆ ಮಾಡಕೊಳ್ಳಬೇಕಾಗಿದೆ ಎಂದರು.ಮನುಷ್ಯರಾಗಿ ಬಾಳಲು, ಬದುಕಲು ಪ್ರೀತಿ ಅತೀ ಅಗತ್ಯ. ಆದರೆ, ಅದೇ ಪ್ರೀತಿಯನ್ನು ಸಾಮಾಜಿಕವಾಗಿ ಅದನ್ನು ನಿಷೇಧಿತ ಕ್ರಿಯೆ ಎಂದು ಬ್ರ್ಯಾಂಡ್ ಮಾಡಲಾಗುತ್ತಿದೆ ಎಂದು ತಿಳಿಸಿದರು.ಹಿರಿಯ ಪತ್ರಕರ್ತ ಬಾ.ಮ. ಬಸವರಾಜ ಯ್ಯ ಅಧ್ಯಕ್ಷತೆ ವಹಿಸಿದ್ದರು. ಡಾ. ಜಿ. ಕಾವ್ಯಶ್ರೀ, ಸನಾವುಲ್ಲಾ ನವಿಲೇಹಾಳ್, ಜಿ.‌ಮುದ್ದುವೀರಸ್ವಾಮಿ ಇತರರು ಇದ್ದರು.