ಸಾಹಿತ್ಯ ಕ್ಷೇತ್ರದ ಸಾಂಸ್ಕøತಿಕ ರಾಯಭಾರಿ ಕುವೆಂಪು:ಶ್ರೀಶೈಲ ನಾಗರಾಳ

ಶಹಾಬಾದ:ಜು.30: ನಾಡಿನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಈ ನಾಡಿನ ಸಾಂಸ್ಕøತಿಕ ರಾಯಭಾರಿ ಕುವೆಂಪು ಎಂದು ಹಿರಿಯ ಸಾಹಿತಿ ಶ್ರೀಶೈಲ ನಾಗರಾಳ ಹೇಳಿದರು.

ಅವರು ಶುಕ್ರವಾರ ಭಂಕೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಭಂಕೂರ ಕಸಾಪ ಘಟಕದ ವತಿಯಿಂದ ಆಯೋಜಿಸಲಾದ ಕುವೆಂಪು ಅವರ ಬದುಕು ಬರಹ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ನಾಡಿನ ಸಾಹಿತ್ಯ ಕ್ಷೇತ್ರದ ಶಾಶ್ವತ ನಾಯಕ ಕುವೆಂಪು ಎಂಬ ಸಂಗತಿಯನ್ನು ಕನ್ನಡ ಮನಸ್ಸುಗಳು ಅಂಗೀಕರಿಸಿದ್ದು ಬೇರೆ ಯಾವ ಸಾಹಿತಿಗೂ ಸಿಗದ ಗೌರವ ಕುವೆಂಪು ಅವರಿಗೆ ಶ್ರೀ ಸಾಮಾನ್ಯರಿಂದ ಸಿಕ್ಕಿದೆ.ಕಾರಣ ಅವರು ಕರ್ನಾಟಕ ರತ್ನ , ರಾಷ್ಟ್ರ ಕವಿ ಸೇರಿದಂತೆ ಅನೇಕ ಬಿರುದುಗಳನ್ನು ಪಡೆದಿರುವುದಕ್ಕೆ ಅಲ್ಲ. ಅವರು ತಮ್ಮ ಸಾಹಿತ್ಯದಲ್ಲಿ ಹೃದಯವಂತಿಕೆ, ವಿಶಾಲವಾದ ಮನೋಭಾವನೆ, ಮಾನವೀಯ ಮೌಲ್ಯಗಳನ್ನು ರಚಿಸಿದಕ್ಕೆ. ಅವರು ತಮ್ಮ ಅನಿಕೇತನ ಕವನದಲ್ಲಿ ವಿಶ್ವಮಾನವ ತತ್ವವನ್ನು ಹೇಳುವುದರ ಮೂಲಕ ಎಲ್ಲರ ಹೃದಯದಲ್ಲಿ ವಿರಾಜಮಾನರಾಗಿ ಉಳಿದಿದ್ದಾರೆ. ಅವರ ಕವಿತೆಯ ತಿರುಳನ್ನು ತಿಳಿದುಕೊಂಡರೆ ನಮ್ಮ ನಿಮ್ಮ ಮುಂದೆ ಮತ್ತೊಬ್ಬ ಬುದ್ಧ, ಅಂಬೇಡ್ಕರ್, ಬಸವಣ್ಣನವರನ್ನು ಕಾಣಬಹುದು.ಇಂದಿನ ಪ್ರಸ್ತುತ ದಿನಮಾನಗಳಲ್ಲಿ ಮಠಾಧೀಶರು, ರಾಜಕೀಯ ವ್ಯಕ್ತಿಗಳು ಸಂಕುಚಿತ ಮನೋಭಾವನೆಯಿಂದ ಮಾನವೀಯ ಮೌಲ್ಯಗಳು ಕಳೆದುಕೊಳ್ಳುತ್ತಿದ್ದಾರೆ. ತಮ್ಮ ಸ್ವಾರ್ಥಕೋಸ್ಕರ ಒಂದು ಜಾತಿ, ಧರ್ಮಕ್ಕೆ ಅಂಟಿಕೊಂಡು ಒಡೆದಾಳು ನೀತಿಯನ್ನು ಅನುಸರಿಸುತ್ತಿದ್ದಾರೆ. ಈ ಸಂಕುಚಿತ ಮನೋಭಾವನೆಯಿಂದ ಮಾನವ ದಾನವವಾಗುತ್ತಾನೆ ಹೊರತು ವಿಶ್ವಮಾನವನಾಗಲು ಸಾಧ್ಯವಿಲ್ಲ. ವಿಶ್ವಮಾನವನಾಗಲು ಕುವೆಂಪು ಅವರು ಹೇಳಿದಂತೆ ಧರ್ಮ, ಜಾತಿ ಸಂಕೋಲೆಗಳ ಬಂಧನದಿಂದ ಮುಕ್ತರಾಗಿ ನನ್ನದು ಎಂಬ ಹೃದಯ ವೈಶ್ಯಾಲತೆಯ ಮನೋಭಾವನೆ ಬಂದಾಗ ಮಾತ್ರ ವಿಶ್ವಮಾನವರಾಗಲು ಸಾಧ್ಯ.ಅದಕ್ಕಾಗಿ ಕುವೆಂಪು ಅವರ ಸಾಹಿತ್ಯವನ್ನು ಅಧ್ಯಯನ ಮಾಡುವ ಅಗತ್ಯತೆ ಎಂದಿಗಿಂತಲೂ ಇಂದು ಅಗತ್ಯವಾಗಿದೆ ಎಂದರು.

ಕಸಾಪ ಗೌರವ ಸಲಹೆಗಾರ ಗಿರಿಮಲ್ಲಪ್ಪ ವಳಸಂಗ ಮಾತನಾಡಿ, ಕುವೆಂಪು ಅವರಂತೆ ನೇರವಾಗಿ, ದಿಟ್ಟವಾಗಿ ಪುರೋಹಿತಶಾಹಿಯನ್ನು ವಿರೋಧಿಸಿ ಬರೆದ ಕವಿ, ದಾರ್ಶನಿಕರು ಕನ್ನಡ ನಾಡಿನಲ್ಲಿ ಬೆರಳಣಿಯಷ್ಟೇ. ಈ ನಾಡಿನ ನೊಂದ ವರ್ಗದ ದನಿಯಾಗಿ ರೈತರ ಪರವಾಗಿ ದಿಟ್ಟದನಿ ಎತ್ತಿದ ಕುವೆಂಪು ಸಾಹಿತ್ಯವನ್ನು ಪ್ರತಿಯೊಬ್ಬರು ಓದಿ ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ, ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ, ಮುಖ್ಯಗುರು ಶಂಕರ ಜಾಧವ ವೇದಿಕೆಯ ಮೇಲಿದ್ದರು. ಭಂಕೂರ ಕಸಾಪ ಅಧ್ಯಕ್ಷ ಪ್ರಕಾಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಭರತ್ ಧನ್ನಾ ಪ್ರಾಸ್ತಾವಿಕ ನುಡಿದರು,ಶಶಿಕಾಂತ ಮಡಿವಾಳ ನಿರೂಪಿಸಿದರು, ಈರಣ್ಣ ಕಾರ್ಗಿಲ್ ಸ್ವಾಗತಿಸಿದರು, ಶಾಂತಮಲ್ಲ ಶಿವಭೋ ವಂದಿಸಿದರು.

ಎಮ್.ಡಿ.ಜಕಾತೆ,ದತ್ತಪ್ಪ ಕೋಟನೂರ್, ವಿಷ್ಣತೀರ್ಥ ಆಲೂರ,ಶಶಿಕಲಾ ಕೋಟನೂರ,ಸಯ್ಯದ್ ಯುನೂಸ್ ಸೇರಿದಂತೆ ಶಾಲಾ ಮಕ್ಕಳು ಇದ್ದರು.

ಇದೇ ಸಂದರ್ಭದಲ್ಲಿ ಆಯೋಜಿಸಲಾದ ಸ್ಫರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು.