
ಧಾರವಾಡ,ಜು.10: ಸಾಹಿತಿಗಳು ತಮ್ಮ ಕೃತಿಗಳಲ್ಲಿ ಪ್ರಾದೇಶಿಕತೆಯ ಮಹತ್ವ ತಿಳಿಸುವ ಪ್ರಯತ್ನ ಮಾಡಬೇಕು. ಅಂದಾಗ ಕನ್ನಡ ನಾಡಿನ ವೈವಿಧ್ಯತೆ ಅರಿಯಲು ಸಾಧ್ಯ ಎಂದು ಸಾಹಿತಿ ಕೃಷ್ಣಾನಂದ ನಾಯಕ ಹೇಳಿದರು.
ನಗರದ ಆಲೂರು ವೆಂಕಟರಾವ್ ಸಭಾಂಗಣದಲ್ಲಿ ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯದಿಂದ ಆಯೋಜಿಸಿದ್ದ “ಜಮಗೋಡಿನ ಸುತ್ತ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರೋತ್ಥಾನ ಸಾಹಿತ್ಯದಿಂದ ಮುದ್ರಣವಾಗುವ ಎಲ್ಲ ಪುಸ್ತಕಗಳು ಅತ್ಯಂತ ಮೌಲ್ಯಯುತವಾಗಿರುತ್ತವೆ. ಪ್ರಸ್ತುತ “ಜಮಗೋಡಿನ ಸುತ್ತ” ಕೃತಿಯಲ್ಲಿ ಲೇಖನ, ಕಥೆ, ಕಾದಂಬರಿ ಹೀಗೆ ಎಲ್ಲ ಸಾಹಿತ್ಯದ ಶೈಲಿ ಕಾಣಬಹುದು. ನಾಡವರ ಸಮುದಾಯದ ಕುರಿತಾದ ಈ ಪುಸ್ತಕ ಅವರ ಸಂಪೂರ್ಣ ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿಗತಿ ಹಾಗೂ ಇತರ ಸಮುದಾಯಗಳ ಒಡನಾಟ ತಿಳಿಸುತ್ತದೆ. ನಾಡವರ ಭಾಷಾ ಶೈಲಿಯಲ್ಲಿರುವ ಈ ಕೃತಿ ಪ್ರಾದೇಶಿಕ ಸೊಗಡನ್ನು ಬಿಂಬಿಸುತ್ತದೆ. ಇದರಲ್ಲಿನ ಕೆಲವು ಕಥೆಗಳು ಸಿನೆಮಾ ಮಾಡಲು ಸಹ ಯೋಗ್ಯವಾಗಿವೆ. ಅಂಕೋಲಾ ಹಾಗೂ ಕರಾವಳಿ ಪ್ರದೇಶಗಳ ಇತಿಹಾಸ, ಪ್ರಾಮುಖ್ಯತೆ ಹೆಚ್ಚಿನ ವಿವರಣೆಗೊಳಪಟ್ಟಿವೆ ಎಂದು ಹೇಳಿದರು.
ಪುಸ್ತಕ ಲೋಕಾರ್ಪಣೆಗೊಳಿಸಿದ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಮಾತನಾಡಿ, ರಾಷ್ಟ್ರಭಕ್ತಿ ಮೂಡಿಸುವಲ್ಲಿ ರಾಷ್ಟ್ರೋತ್ಥಾನದ ಕಾರ್ಯ ಅದ್ವಿತೀಯವಾಗಿದೆ. ವಿಶಾಲ ಕರ್ನಾಟಕದಲ್ಲಿ ವಿವಿಧ ಶೈಲಿಯ ಭಾಷೆ ಆಹಾರ ಪದ್ಧತಿ ಕಾಣುತ್ತವೆ. ಅಂಥ ಪ್ರಾದೇಶಿಕತೆಯ ಚಿತ್ರಣವನ್ನು ಈ ಕೃತಿ ಕಟ್ಟಿಕೊಡುತ್ತದೆ. ಈ ರೀತಿಯ ಕೃತಿಗಳಿಂದಲೇ ನಮ್ಮ ಸಂಸ್ಕೃತಿಯ ಮಹತ್ವ ಮುಂದಿನ ಪೀಳಿಗೆಗೆ ತಿಳಿಸಲು ಸಾಧ್ಯ ಎಂದು ಹೇಳಿದರು.
ಬಹುಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಬಸವಪ್ರಭು ಜಿರ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಕೃತಿ ಓದುಗರಿಗೆ ಆತ್ಮೀಯತೆಯ ಅನುಭವ ನೀಡುತ್ತದೆ. ಇಂತಹ ಕೃತಿಗಳು ಹೆಚ್ಚು ಪ್ರಕಟವಾಗಲಿ ಎಂದರು.
ರಾಷ್ಟ್ರೋತ್ಥಾನ ಆಡಳಿತ ಮಂಡಳಿ ಸದಸ್ಯ ಅಶೋಕ ಸೋನಕರ್ ಮಾತನಾಡಿ, ಜನ ಜಾಗೃತಿ, ಜನ ಶಿಕ್ಷಣ, ಜನಸೇವೆ ಮೂರು ಧ್ಯೇಯದೊಂದಿಗೆ ರಾಷ್ಟ್ರೋತ್ಥಾನ ಪರಿಷತ್ ಕಾರ್ಯನಿರ್ವಹಿಸುತ್ತಿದೆ. ಈವರೆಗೆ 162 ಕೃತಿ ಬಿಡುಗಡೆಗೊಳಿಸುವ ಮೂಲಕ ರಾಷ್ಟ್ರೀಯ ಸಾಹಿತ್ಯದ ಏಳಿಗೆಗೆ ಕೊಡುಗೆ ನೀಡಿದೆ ಎಂದು ಹೇಳಿದರು.
ಕೃತಿಯ ಲೇಖಕ ಮನೋಹರ ನಾಯಕ ಮಾತನಾಡಿದರು. ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಕಾರ್ಯದರ್ಶಿಗಳಾದ ರಾಘವೇಂದ್ರ ಅಂಬೇಕರ, ಸಾಹಿತಿಗಳಾದ ಹ.ವೇಂ. ಕಾಖಂಡಕಿ, ಅರವಿಂದ ಕುಲಕರ್ಣಿ ಇತರರು ಪಾಲ್ಗೊಂಡಿದ್ದರು.