
ದಾವಣಗೆರೆ.ಮೇ.೧; ಮತವೆನ್ನುವ ಪದ ಅನೇಕ ಅರ್ಥ ಹೊಂದಿದೆ ಅದರೆ ಇಂದು ನಾವು ಮಾಡುವ ಮತದಾನ ಪ್ರಕ್ರಿಯೆ ನಮ್ಮ ವೈಯಕ್ತಿಕವಾದ ನಿರ್ಧಾರವನ್ನು ಅವಲಂಬಿಸಬೇಕು. ಪ್ರಸ್ತುತ ಚುನಾವಣೆಯ ಪ್ರಚಾರದ ಅರ್ಭಟಕ್ಕೆ ಮಾರು ಹೋಗದೇ ಮಾನವೀಯ ಮೌಲ್ಯದ ಸಾಮಾಜಿಕ ಕಾಳಜಿಯ ಅಭ್ಯರ್ಥಿಗಳಿಗೆ ಪ್ರೀತಿಯ ಸ್ಪರ್ಶವಿರುವ ಮತ ಹಾಕುವುದರೊಂದಿಗೆ ಅದು ಮಾನವೀಯತೆಯ ಮತವಾಗಲಿ. ಸಾಹಿತ್ಯದ ಪದಗಳಿಗೆ ಅಂತರಾತ್ಮದ ಭಾವನೆಯ ಸ್ಪರ್ಶವಾದಾಗ ಮಾತ್ರ ಕವನಕ್ಕೆ ಪರಿಪೂರ್ಣತೆ ಬರುತ್ತದೆ ಹಾಗೂ ನಮ್ಮ ಕವನ ಕೇವಲ ವಾಚನಕ್ಕೆ ಸೀಮಿತವಾಗದೇ ಸಮಾಜಮುಖೀ ಪರಿವರ್ತನೆಯ ಒಳ್ಳೆಯ ಸಂದೇಶವನ್ನು ಸಾರುವಂತಿರಬೇಕು ಇಂದು ಭ್ರಷ್ಟಾಚಾರ ಎಲ್ಲಡೆ ತಾಂಡವಾಡುತ್ತದೆ. ಸಾಮಾಜಿಕ ಕಳಕಳಿಯ ನಿಷ್ಠೆ, ಬದ್ಧತೆಯನ್ನು ಗಮನಿಸಿ ನಿಮ್ಮ ಮತ ಚಲಾಯಿಸಬೇಕು ಎಂದು ಹಿರಿಯ ಪತ್ರಕರ್ತರು, ಕವಿಗಳಾದ ಬಿ.ಎನ್.ಮಲ್ಲೇಶ್ ತಮ್ಮ ಅಭಿಮತ ವ್ಯಕ್ತಪಡಿಸಿದರು.ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಕಲಾಕುಂಚ ಕಛೇರಿ ಅವರಣದ ಸಭಾಂಗಣದಲ್ಲಿ ಮತದಾನ ಜಾಗೃತಿ ಕವಿಗೋಷ್ಠಿ ಸಮಾರಂಭವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ನಾಡಿನ ವಿವಿಧ ಜಿಲ್ಲೆಗಳಿಂದ ಸುಮಾರು ಐವತ್ತೂಕ್ಕೂ ಹೆಚ್ಚು ಹಿರಿಯ, ಕಿರಿಯ, ಕವಿ ಕವಯತ್ರಿಯರು ಮತದಾನದ ಕುರಿತಂತೆ ಒಳ್ಳೆಯ ಸಂದೇಶಗಳೊAದಿಗೆ ಕವನ ವಾಚನ ಮಾಡಿದರು.ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಹರಿಹರದ ಹಿರಿಯ ಕವಿ ಡಾ. ಡಿ.ಪ್ರಾನ್ಸಿಸ್ ಕ್ಲೇವಿಯರ್, ಹಿರಿಯ ಕವಿಯತ್ರಿ ಹೇಮಾ ಶಾಂತಪ್ಪ ಪೂಜಾರಿ, ಹಾವೇರಿ ಜಿಲ್ಲೆಯ, ರಾಣೇಬೆನ್ನೂರಿನ ಯುವ ಕವಿ, ಸಾಹಿತಿ ಬಸವರಾಜ್ ಎಸ್.ಬಾಗೇವಾಡಿ ಮಠ, ಹಾಸನ ಜಿಲ್ಲೆಯ ಅರಸೀಕೆರೆಯ ಯುವ ಕವಿಯತ್ರಿ ಸಹನಾ ಕೆ.ಬಿ.ಶೇಟ್ ತಮ್ಮ ಕವನ ವಾಚನ ಮಾಡಿ ಮತದಾನದ ಈ ಸೂಕ್ತ ಸಮಯದಲ್ಲಿ ಸಾರ್ವಜನಿಕರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಈ ಸತ್ಕಾರ್ಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಚುಟುಕು ಕವಿ, ಸಾಹಿತಿಗಳಾದ ಸಾಲಿಗ್ರಾಮ ಗಣೇಶ್ ಶೆಣೈಯವರು ವಹಿಸಿ ಮಾತನಾಡಿ, ಚುನಾವಣಾ ಆಯೋಗದವರು ಕಟ್ಟುನಿಟ್ಟಾಗಿ ಕ್ರಮಬದ್ಧವಾದ ಕೆಲವು ಕಾನೂನುಗಳನ್ನು ಜಾರಿಗೆ ತರಬೇಕಾಗಿದೆ ಉಡಾಫೆಯಿಂದ, ಉದಾಸೀನತೆಯಿಂದ ಮತ ಚಲಾಯಿಸದೇ ಇದ್ದವರಿಗೆ ಕೇಂದ್ರ, ರಾಜ್ಯ ಸರ್ಕಾರಗಳ ಅನುದಾನ, ಆಧಾರ್ ಕಾರ್ಡ್ ಸೇರಿದಂತೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ರದ್ದುಗೊಳಿಸಬೇಕು ಎಂದು ನಿಷ್ಠುರವಾಗಿ ಮಾತನಾಡಿದರು.