
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.31: ಸಾಹಿತ್ಯವಿಲ್ಲದೆ ಸಮಾಜ ಉಳಿಯಲು ಸಾಧ್ಯವಿಲ್ಲ ಎಂದು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಗಳಾದ ಪ್ರೊ. ಸಾಹೇಬ್ ಅಲಿ ಹೆಚ್ ನಿರಗುಡಿ ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲೀಷ್ ಅಧ್ಯಯನ ವಿಭಾಗ ಮತ್ತು ಇಂಗ್ಲೀಷ್ ಪದವಿ ಶಿಕ್ಷಕರ ಸಂಘದ ಜಂಟಿ ಸಹಯೋಗದಲ್ಲಿ ಆಯೋಜಿಸಿದ್ದ ‘ರಿವಿಸಿಟಿಂಗ್ ದಿ ಇಂಟರ್‍ಸೆಕ್ಷನಲ್ ಆಫ್ ಲಿಟ್ರೇಚರ್, ಕಾಸ್ಟ್ ಆ್ಯಂಡ್ ಜಂಡರ್’ ಎಂಬ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸಾಹಿತ್ಯವು ವ್ಯಕ್ತಿಗಳಷ್ಟೇ ಅಲ್ಲದೆ ಸಮಾಜದ ಮೇಲೂ ಹೆಚ್ಚು ಪ್ರಭಾವ ಬೀರುತ್ತದೆ. ನಮ್ಮ ಸಮಾಜದ ಅನಿಷ್ಟ ಪದ್ಧತಿಗಳಾದ ಜಾತೀಯತೆ, ಮೂಢನಂಬಿಕೆ, ಅನ್ಯಾಯ ಇತ್ಯಾದಿ ಅಂಶಗಳಿಂದ ಕಲುಷಿತಗೊಂಡಿದೆ. ಇಂತಹ ಅಂಶಗಳ ವಿರುದ್ಧ ಹೋರಾಡಲು ಸಾಹಿತ್ಯವು ಸಹಕಾರಿಯಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಸಾಹಿತ್ಯವನ್ನು ಆಳವಡಿಸುವುದು ಬಹುಮುಖ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ದಲಿತ ಸ್ತ್ರೀವಾದಿ ಲೇಖಕಿ ಪಿ. ಶಿವಕಾಮಿ ಮಾತನಾಡಿ, ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆಯ ಮೂಲಕ ಶೋಷಣೆಗೊಳಗಾದವರನ್ನು ದೀನ-ದಲಿತ ಎಂದು ವರ್ಗಿಕರಿಸಲಾಗಿದೆ. ಜಾತಿ ಮತ್ತು ಲಿಂಗ ತಾರತಮ್ಯದಿಂದ ನಮ್ಮ ಸಮಾಜದ ಮೇಲೆ ಆಗಿರುವ ಪರಿಣಾಮಗಳ ಕುರಿತು ವಿವರಿಸಿದರು. ಉತ್ತಮ ಸಮಾಜ ನಿರ್ಮಾಣದಲ್ಲಿ ಕಾದಂಬರಿಗಳ ಪಾತ್ರವು ಮುಖ್ಯವಾದದ್ದು ಎಂದು ಆಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಭಾಗವಾಗಿದ್ದ ಮುಖ್ಯ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಚಾರ ಸಂಕಿರಣ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಇಂಗ್ಲೀಷ್ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ಎನ್ ಶಾಂತನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎಸ್. ಸಿ. ಪಾಟೀಲ್, ಮೌಲ್ಯಮಾಪನ ಕುಲಸಚಿವರಾದ ಪ್ರೊ. ರಮೇಶ್ ಓಲೇಕಾರ್, ವಿತ್ತಾಧಿಕಾರಿ ಪ್ರೊ. ಸದ್ಯೋಜಾಥಪ್ಪ, ಕನ್ನಡ ಬರಹಗಾರ ಪ್ರೊ. ಕಾಳೇಗೌಡ ನಾಗವಾರ, ಡಾ. ಬಸವರಾಜು ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.