ಸಾಹಿತಿ ಹಂಸಲೇಖಗೆ ಪ್ರತಾಪ್ ಸಿಂಹ ಸಲಹೆ

ಮೈಸೂರು,ನ.15:- ಓರ್ವ ಸಾಧಕನ ಕುರಿತು ಮಾತನಾಡುವಾಗ ವಿವೇಚನೆ ಇಟ್ಟು ಮಾತನಾಡಿ ಎಂದು ಸಾಹಿತಿ ಹಂಸಲೇಖ ಗೆ ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದರು.
ಇಂದು ಮೈಸೂರಿನಲ್ಲಿ ಪೇಜಾವರ ಶ್ರೀ ಕುರಿತ ಹಂಸಲೇಖ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಹಂಸಲೇಖ ಅವರು ಕರ್ನಾಟಕದಲ್ಲಿ ಚಲನಚಿತ್ರ ಸಾಹಿತ್ಯ ರಚನೆ ಇರಬಹುದು, ಸಂಗೀತ ಇರಬಹುದು, ಈ ಕ್ಷೇತ್ರದಲ್ಲಿ ಬಹಳ ದೊಡ್ಡ ಸಾಧನೆ ಮಾಡಿ ನಮ್ಮೆಲ್ಲರ ಹೃದಯದಲ್ಲಿ ಸ್ಥಾನ ಪಡೆದಿರುವಂತಹ ಒಳ್ಳೆಯ ವ್ಯಕ್ತಿ.
ಆದರೆ ಇತ್ತೀಚಿನ ದಿನಗಳಲ್ಲಿ ಉಳಿದ ಸಾಧಕರ ಬಗ್ಗೆ ಅಸಂಬದ್ಧದ ಮಾತುಗಳನ್ನಾಡಿ ಜನಾಭಿಪ್ರಾಯ ವಿರುದ್ಧವಾದಾಗ ನಾಮಕಾವಸ್ತೆಗೆ ಕ್ಷಮೆಯನ್ನು ಕೇಳುವುದು ಚಾಳಿಯಾಗಿಬಿಟ್ಟಿದೆ. ಈ ಚಾಳಿಗೆ ಹಂಸಲೇಖ ಅವರು ಬಲಿಯಾಗಿದ್ದು ನಿಜಕ್ಕೂ ಕೂಡ ವೈಯುಕ್ತಿಕವಾಗಿ ಬೇಸರವಾಗಿದೆ. ನೋವಾಗಿದೆ. ಪೇಜಾವರ ಶ್ರೀಗಳ ಕೋಟ್ಯಂತರ ಅಭಿಮಾನಿಗಳಿಗೂ ನೋವಾಗಿದೆ. ಸಿಟ್ಟು ಕೂಡ ಬಂದಿದೆ ಎಂದರು.
ಪೇಜಾವರ ಶ್ರೀಗಳ ಬಗ್ಗೆ ಮಾತನಾಡಬೇಕಾದರೆ ಹಂಸಲೇಖ ಅವರು ಸ್ವಲ್ಪ ಯೋಚನೆ ಮಾಡಬೇಕಿತ್ತು. ಪರಿಜ್ಞಾನವನ್ನು ಇಟ್ಟುಕೊಳ್ಳಬೇಕಿತ್ತು. ಪೇಜಾವರ ಶ್ರೀಗಳು ಎಲ್ಲ ಜಾತಿ ಸ್ವಾಮಿಗಳ ತರ ಅಲ್ಲ. ಇಡೀ ದೇಶಾದ್ಯಂತ ರಾಮಜನ್ಮಭೂಮಿ ಚಳವಳಿ ಉಚ್ಛ್ರಾಯ ಸ್ಥಿತಿಗೆ ಬಂದಂತಹ ಸಂದರ್ಭದಲ್ಲಿ ಮರ್ಯಾದಾ ಪುರುಷೋತ್ತಮ ರಾಮನಿಗೋಸ್ಕರ ಒಂದು ದೇವಸ್ಥಾನವನ್ನು ಕಟ್ಟಬೇಕೆಂದು ಹೋರಾಟದ ಮುಂಚೂಣಿಯಲ್ಲಿ ನಿಂತು ಹೋರಾಡಿದ ಕರ್ನಾಟಕದ ಯತಿವರ್ಯ.
ಅದು ಮಾತ್ರವಲ್ಲ. ಇಂದು ಭೇದ ಭಾವ, ತಾರತಮ್ಯ, ಅಸಮಾನತೆ ಎನ್ನುವುದು ಜನರ ಮನಸ್ಸಿನಲ್ಲಿದೆ. ಅದನ್ನು ತೊಡೆಯಲು ದಲಿತರ ಕೇರಿಗೆ ಪಾದಯಾತ್ರೆ. ದಲಿತರ ಮನೆಗೆ ಹೋದಂತಹ ಒಂದು ಕರ್ಮಠ ವ್ಯವಸ್ಥೆಯನ್ನು ಮೀರಿ ಬಂದು ಹಿಂದೂ ಧರ್ಮದಲ್ಲಿ ಸಮಾನತೆಯನ್ನು, ಸಮಭಾವವನ್ನು ತರಲು ಪ್ರಾಮಾಣಿಕವಾಗಿ ಪ್ರಯತ್ನಪಟ್ಟ ಹಾಗೂ ಆ ಮೂಲಕ ಎಲ್ಲರಿಗೂ ಒಂದು ಮೇಲ್ಪಂಕ್ತಿ ಹಾಕಿಕೊಟ್ಟಂತಹ ಯತಿಗಳು ಅಂದರೆ ಪೇಜಾವರ ಶ್ರೀಗಳು. ಆದರೆ ನನಗೆ ಹಂಸಲೇಖ ಅವರು ಪೇಜಾವರ ಶ್ರೀಗಳು ದಲಿತರ ಮನೆಗೆ ಹೋದಾಗ ಕೋಳಿಮಾಂಸ ಕೊಟ್ಟರೆ ತಿಂತಾರಾ? ಕುರಿ ರಕ್ತದ್ದು ಪ್ರೈ ಕೊಟ್ಟರೆ ತಿಂತಾರಾ? ಲಿವರ್ ಪ್ರೈ ಕೊಟ್ಟರೆ ತಿಂತಾರಾ, ಈ ಮಾತು ಯಾಕೆ ಬಂತು ಅರ್ಥವಾಗುತ್ತಿಲ್ಲ. ಹಂಸಲೇಖ ಅವರೇ ಅದು ಯಾವುದೇ ಜಾತಿ ಜನಾಂಗದ ಸ್ವಾಮೀಜಿಗಳಿರಬಹುದು. ಅವರೆಲ್ಲರಾಹಾರ ಪದ್ಧತಿ ಸಾಧು ಸಂತರದ್ದು ಸಸ್ಯಾಹಾರವಾಗಿರುತ್ತದೆ. ಪೇಜಾವರ ಶ್ರೀಗಳು ಹೋಗಿದ್ದು ಮನಸ್ಸಿನಲ್ಲಿರುವ ತಾರತಮ್ಯ ತೊಡೆದುಹಾಕಲಿಕ್ಕೇ ಹೊರತು ಆಹಾರ ಪದ್ಧತಿ ವಿಚಾರಕ್ಕಲ್ಲ ಎಂದು ಸ್ಪಷ್ಟಪಡಿಸಿದರು.
ಅವರು ಕ್ಷಮೆ ಕೇಳಿದ್ದಾರೆ. ಇನ್ಯಾವ ರೀತಿ ಕ್ಷಮೆ ಕೇಳಬೇಕು ಎಂದ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಕ್ಷಮೆ ಕೇಳಿರುವ ಸ್ಟೇಟ್ ಮೆಂಟ್ ನೋಡಿ ಮೊಲನೆಯದು ಎರಡನೆಯದು ಅಂತಾರೆ. ನಾನೇನೋ ಹೀಗೆ ಹೇಳಿ ಬಿಟ್ಟೆ ಅಂತಾರೆ. ಯಾವುದೋ ಓರ್ವ ಸಾಮಾನ್ಯ ವ್ಯಕ್ತಿ, ದಾರಿಹೋಕ ಈ ರೀತಿ ಹೇಳಿಕೆ ನೀಡಿರುವುದಲ್ಲ. ಅದು ಹಂಸಲೇಖ ಅಂತಹ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವವರು. ಅಭಿರುಚಿ ಇಟ್ಟುಕೊಂಡಿರುವವರು, ಸಂಗೀತ ಕ್ಷೇತ್ರದಲ್ಲಿ ಕೂಡ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿಕೊಂಡಿರುವವರು ಅವರ ಬಾಯಿಯಿಂದ ಯಾವುದೇ ಪದ ಜಾರುವ ಸಾಧ್ಯತೆ ಇಲ್ಲ. ಅದಕ್ಕೋಸ್ಕರ ನಾನು ಕೇಳುತ್ತಿರುವುದು ನಿಮಗೆಷ್ಟು ಜನ ಅಭಿಮಾನಿಗಳಿದ್ದಾರೋ, ಪೇಜಾವರ ಶ್ರೀಗಳಿಗೂ ಅಷ್ಟೇ ಅಭಿಮಾನಿಗಳಿದ್ದಾರೆ. ನಿಮಗೆ ಕರ್ನಾಟಕದಲ್ಲಿ ಅಭಿಮಾನಿಗಳಿದ್ದಾರೆ. ಪೇಜಾವರ ಶ್ರೀಗಳಿಗೆ ರಾಷ್ಟ್ರಾದ್ಯಂತ ಕೂಡ ಪೇಜಾವರ ಶ್ರೀಗಳಿಗೆ ಅಭಿಮಾನಿಗಳಿದ್ದಾರೆ. ಇನ್ನೊಬ್ಬ ಸಾಧಕನ ಬಗ್ಗೆ ಮಾತನಾಡುವಾಗ ವಿವೇಚನೆ ಇಟ್ಟು ಮಾತನಾಡಿ ಎಂದರು.