ಸಾಹಿತಿ ಸೋಮಶೇಖರ ಜತ್ತಿಗೆ ಸನ್ಮಾನ

ತಿಕೋಟಾ, ಡಿ.28-ಇಲ್ಲಿಗೆ ಸಮೀಪದ ಹೊನವಾಡದಲ್ಲಿ ಜರುಗಿದ ನಂದಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕಲಸಾರೋಹಣ ಸಂದರ್ಭದಲ್ಲಿ ಸಾಹಿತಿ ಸೋಮಶೇಖರ ದಾ. ಜತ್ತಿಯವರನ್ನು ಸನ್ಮಾನಿಸಲಾಯಿತು.
ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಇವರು ಕಳೆದ ಐದು ದಶಕಗಳಿಂದ ಸಾಹಿತ್ಯ ಕೃಷಿ ಮಾಡುತ್ತಿದ್ದು ಜಿಲ್ಲಾಡಳಿತ ಇವರ ಸೇವೆಯನ್ನು ಗುರುತಿಸಿ ಸನ್ಮನಿದ್ದು ಸಂತಸ ತಂದಿದೆ ಎಂದು ಸದಲಗಾದ ಶ್ರದ್ದಾನಂದ ಶ್ರೀಗಳು ಹೇಳಿದರು.
ಶಿರೋಳದ ಶಂಕರಾರೊಡ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಕಕಮರಿಯ ಆತ್ಮಾನಂದ ಸ್ವಾಮಿಗಳು, ತಿಕೋಟಾ ಹಿರೇಮಠದ ಶಿವಬಸವ ಸ್ವಾಮಿಗಳು ಹಾಗೂ ಖ್ಯಾತ ಪ್ರವಚನಕಾರ ಬಾಬು ಮಹಾರಾಜ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ದಾನಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮ ವನ್ನು ನಂದಿ ಬಸವೇಶ್ವರ ದೇವಸ್ಥಾನ ಸಮಿತಿ ಗ್ರಾಮಸ್ತರು ಆಯೋಜನೆ ಮಾಡಿದ್ದರು. ಮುರುಗೆಪ್ಪ ಕೋಟಿ, ಮುತ್ತು ಹಿರೇಮಠ, ಅಪ್ಪು ಕೋಟಿ, ಸೋಮನಿಂಗ ಐನಾಪುರ ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಪ್ರಾರಂಭದಲ್ಲಿ ನಿಂಗಪ್ಪ ಕಲಘಟಗಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ನಿಂಗಪ್ಪ ಕೋಟಿ ನಿರೂಪಿಸಿದರು. ಕೊನೆಯಲ್ಲಿ ಧರೆಪ್ಪ ಸಿದ್ದನಾಥ ವಂದಿಸಿದರು.