ಸಾಹಿತಿ ಸಂಗಣ್ಣ ಹೋತಪೇಟೆ ನಿಧನದಿಂದ ಜಿಲ್ಲೆಗೆ ಬಹುವಿಧ ನಷ್ಟ: ಡಾ. ಸಿದ್ದಪ್ಪ ಹೊಟ್ಟಿ

ಯಾದಗಿರಿ;ಸೆ.16: ಚತುರ್ಭಾಷಾ ಸಾಹಿತಿಯಾಗಿದ್ದ ಜಿಲ್ಲೆಯ ಹೆಮ್ಮೆಯ ಹಾಗೂ ಹಿರಿಯ ಸಾಹಿತಿ ಸಂಗಣ್ಣ ಹೋತಪೇಟೆ ಅವರ ನಿಧನದಿಂದ ಜಿಲ್ಲೆಯ ಬಹುವಿಧ ಸಾಹಿತ್ಯ ವಲಯ ಬಡವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಸಿದ್ದಪ್ಪ ಹೊಟ್ಟಿ ಶೋಕ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇಲ್ಲಿನ ಹಿಂದಿ ಪ್ರಚಾರ ಸಭಾ ಭವನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಗಣ್ಣ ರಂತಹ ಹಿರಿಯ ಬಹುಭಾಷಾ ಸಾಹಿತಿಯನ್ನು ಕಳೆದುಕೊಂಡು ಜಿಲ್ಲೆಯಲ್ಲಿ ಬಹುವಿಧ ನಷ್ಟ ಅನುಭವಿಸಿದೆ. ವಿಶೇಷವಾಗಿ ನೊವೆಲ್ ಕೊರೋನಾ ವೈರಸ್ ನಿಂದಾಗಿ ಸಾಕಷ್ಟು ಸಾಹಿತಿ, ಕಲಾವಿದರು, ಸಾಹಿತ್ಯ ಕಲೆ, ಸಂಸ್ಕøತಿ ಪ್ರೇಮಿಗಳನ್ನು ಕಳೆದುಕೊಂಡಿತು. ರಾಜಾ ಮದನಗೋಪಾಲ ನಾಯಕರಿಂದ ಹಿಡಿದು ಡಾ. ಈಶ್ವರಯ್ಯ ಮಠ ಸೇರಿದಂತೆ ಸಾಲು ಸಾಲು ಸಾಹಿತಿಗಳು ಕಳೆದುಕೊಳ್ಳುವ ದೌರ್ಭಾಗ್ಯ ಈ ವರ್ಷ ಬಂದೆರಗಿದೆ. ಈದೀಗ ಸಂಗಣ್ಣ ನವರಂತಹ ಹಿರಿಯ ಸಾಹಿತಿ ಎಲ್ಲರೊಂದಿಗೆ ಬರೆಯುತ್ತಿದ್ದ, ವಿಶೇಷವಾಗಿ ಸಾಹಿತ್ಯ ಪರಿಷತ್ತಿನ ಎಲ್ಲ ಚಟುವಟಿಕೆಗಳಿಗೆ ಸಹಯೋಗ ನೀಡುತ್ತಿದ್ದ ಹಿರಿಯ ಚೇತನ ಇಲ್ಲವಾಗಿರುವುದು ಪರಿಷತ್ತಿಗೂ ತುಂಬಲಾರದ ನಷ್ಟವಾಗಿದೆ ಎಂದು ಶೋಕ ವ್ಯಕ್ತಪಡಿಸಿದರು.
ಸಂತಾಪ ಸೂಚಕ ಸಭೆಯಲ್ಲಿ ತಾಲ್ಲೂಕು ಕಸಾಪ ಅದ್ಯಕ್ಷ ಡಾ. ಭೀಮರಾಯ ಲಿಂಗೇರಿ ವಡಗೇರಿ ತಾಲ್ಲೂಕು ಅಧ್ಯಕ್ಷ ಡಾ. ಗಾಳೆಪ್ಪ ಪೂಜಾರಿ, ಪ್ರಾಂಶುಪಾಲ ಡಾ. ಎಸ್.ಎಸ್. ನಾಯಕ, ಸಾಹಿತಿ ವಿಶ್ವನಾಥರೆಡ್ಡಿ ಗೊಂದೆಡಿಗಿ ಮಾತನಾಡಿ ಸರಳ ಸಜ್ಜನಿಕೆಯ ಹಿರಿಯ ಸಾಹಿತಿ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿದ್ದ, ಸೌಮ್ಯ ವ್ಯಕ್ತಿತ್ವದ ಅವರ ನಿಲುವು ಎಲ್ಲರಿಗೂ ಮಾದರಿಯಾಗಿತ್ತು ಎಂದು ಸ್ಮರಿಸಿಕೊಂಡರು.
ಸಭೆಯಲ್ಲಿ ಆರ್. ಮಹಾದೇವಪ್ಪ ಅಬ್ಬೆತುಮಕೂರು, ನೂರೊಂದಪ್ಪ ಲೇವಡಿ, ನಾಗೇಂದ್ರ ಜಾಜಿ, ಬಸವಂತ್ರಾಯ ಮಾಲಿ ಪಾಟೀಲ್, ಚಂದ್ರಶೇಖರ ಅರಳಿ, ಸ್ವಾಮಿದೇವ ದಾಸನಕೇರಿ, ಸಂಗಮೇಶ ಬುಕ್ಕ, ಸಚಿನರೆಡ್ಡಿ, ಜಗದೀಶ ಮಸ್ಕನಳ್ಳಿ, ಅನಿಲ್ ಗುರೂಜಿ, ದೇವು ವರ್ಕನಳ್ಳಿ ಇನ್ನಿತರರು ಇದ್ದರು.