ಕಲಬುರಗಿ,ಜು.19: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತಿ ಮತ್ತು ವಿದ್ಯಾರ್ಥಿಗಳ ಮುಖಾ ಮುಖಿ ಎಂಬ ವಿಶೇಷ ಮತ್ತು ಅಪರೂಪದ ಕಾರ್ಯಕ್ರಮವೊಂದನ್ನು ನಗರದ ಆಳಂದ ರಸ್ತೆಯಲ್ಲಿರುವ ಭಾಗ್ಯೋದಯ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿ ಇಂದಿನ ಮಕ್ಕಳಲ್ಲಿ ಓದುವ ಮತ್ತು ಸಾಹಿತ್ಯಾಸಕ್ತಿ ಮೂಡಿಸುವ ಕಥೆ, ಕವನ, ಸಾಹಿತ್ಯದ ಹೊಸ ವಿಚಾರಗಳನ್ನು ತಿಳಿಸಿಕೊಡುವ ಹೊಸ ಪ್ರಯೋಗವೊಂದನ್ನು ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಕ್ಕಳ ಸಾಹಿತಿ-ಹಿರಿಯ ಲೇಖಕ ಹೆಚ್.ಬಿ.ತೀರ್ಥೆ ಅವರು, ಇಂದಿನ ಪ್ರಜ್ಞಾವಂತ ವಿದ್ಯಾರ್ಥಿಗಳು ತಮ್ಮಲ್ಲಿನ ಜ್ಞಾನ ವಿಕಾಸಗೊಳಿಸಿಕೊಳ್ಳಲು ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದ ಅವರು, ವಿದ್ಯಾರ್ಥಿ ಮತ್ತು ಯುವ ಸಮುದಾಯದಲ್ಲಿ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸುವ ಜವಾಬ್ದಾರಿ ನಮ್ಮ ಪಾಲಕರ ಮೇಲಿದೆ. ಸಾಹಿತ್ಯ, ಸಾಂಸ್ಕøತಿಕ ಕಾರ್ಯಕ್ರಮಗಳು, ಗ್ರಂಥಾಲಯಗಳು ಮತ್ತು ಪುಸ್ತಕ ಮಳಿಗೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಮೂಲಕ ಅವರಲ್ಲಿ ವಿಶೇಷ ಆಸಕ್ತಿಯನ್ನು ಹೆಚ್ಚಿಸುವ ಕಾರ್ಯ ಮಾಡಬೇಕಿದೆ. ಪರಿಷತ್ತು ಹಮ್ಮಿಕೊಳ್ಳುತ್ತಿರುವ ಇಂಥ ಕಾರ್ಯಕ್ರಮಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯುಳ್ಳ ಮಕ್ಕಳನ್ನು ಪ್ರೋತ್ಸಹಿಸುವುದರಿಂದ ಸಾಹಿತ್ಯ ರಚನೆಗೆ ಹೆಚ್ಚಿನ ಪ್ರೋತ್ಸಾಹ ದೊರೆದಂತಾಗುತ್ತಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ತಮ್ಮ ವಿದ್ಯಾರ್ಥಿ ಜೀವನದಿಂದಲೇ ಕನ್ನಡ ಸಾಹಿತ್ಯವನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಇದಿರಂದಮ ಭವಿಷ್ಯದಲ್ಲಿ ಉತ್ತಮ ಕೃತಿಗಳನ್ನು ರಚನೆ ಮಾಡಲು ತುಂಬಾ ಸಹಕಾರಿಯಾಗುತ್ತದೆ. ಹೀಗಾಗಿ ತಮ್ಮ ದೈನಂದಿನದ ವಿದ್ಯಾಭ್ಯಾಸದ ಜತೆಗೆ ಹಿರಿಯ ಸಾಹಿತಿಗಳು ರಚಿಸಿರುವ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡರೆ ಮಾತ್ರ ಜೀವನದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ತಾಲೂಕಾ ಕಸಾಪ ಅಧ್ಯಕ್ಷ ಗುರುಬಸಪ್ಪ ಎಸ್.ಸಜ್ಜನಶೆಟ್ಟಿ ಇಂದಿನ ವಿದ್ಯಾರ್ಥಿಗಳು ತಮ್ ಪಠ್ಯ ಪುಸ್ತಕಗಳನ್ನು ಓದುವ ಜೊತೆಗೆ ಇತರೆ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪಠ್ಯ ಪುಸ್ತಕಗಳನ್ನು ನಮ್ಮ ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿಸುತ್ತವೆ. ಇತರ ಪುಸ್ತಕಗಳು ಜ್ಞಾನವಂತರನ್ನಾಗಿಸುತ್ತವೆ. ಹಾಗಾಗಿ ಹಿರಿಯ ಸಾಹಿತಿಗಳ ಅನುಭವದಿಂದ ಮೂಡಿಬಂದಿರುವ ಪುಸ್ತಕಗಳನ್ನು ಓದಿದರೆ ಬದುಕಿನಲ್ಲಿ ಎನಾದರೂ ಸಾಧಿಸಲಿಕ್ಕೆ ಸಾಧ್ಯವಾಗುತ್ತದೆ. ಆ ಕಾರಣಕ್ಕಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶಾಲಾ ವಿದ್ಯಾರ್ಥಿಗಳ ಬಳಿ ಹಿರಿಯ ಸಾಹಿತಿಗಳನ್ನು ಕರೆದುಕೊಂಡು ಹೋಗಿ ಅವರ ಅನುಭವದ ನುಡಿಗಳನ್ನು ಕೇಳಿಸಿ, ವಿದ್ಯಾರ್ಥಿಗಳನ್ನು ಉತ್ತಮ ನಾಗರೀಕರನ್ನಾಗಿ ನಿರ್ಮಿಸುವ ಉದ್ದೇಸ ಹೊಂದಿದೆ ಎಂದರು.
ಭಾಗ್ಯೋದಯ ಕನ್ನಡ ಮಾಧ್ಯಮ ಶಾಲೆಯ ಮುಖ್ಯಸ್ಥೆ ದಾನೇಶ್ವರಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಸಿ ಶಿವರಾಜ ಎಸ್.ಅಂಡಗಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಉತ್ತರ ವಲಯ ಅಧ್ಯಕ್ಷೆ ವಿಜಯಲಕ್ಷ್ಮಿ ಹಿರೇಮಠ, ತಾಲೂಕಾ ಕಸಾಪ ಗೌರವ ಕಾರ್ಯದರ್ಶಿಗಳಾದ ವಿಶಾಲಾಕ್ಷೀ ಮಾಯಣ್ಣವರ್, ವಿಶ್ವನಾಥ ಯನಗುಂಟಿ ಕೋಶಾಧ್ಯಕ್ಷ ಕುಪೇಂದ್ರ ಬರಗಾಲಿ, ಪ್ರಮುಖರಾದ ಶರಣಗೌಡ ಪೊಲೀಸ್ ಪಾಟೀಲ, ಶ್ರೀಕಾಂತ ಪಾಟೀಲ ದಿಕ್ಸಂಗಾ, ಸಿದ್ಧರಾಮ ಸರಸಂಬಿ, ಶಿವಲೀಲಾ ಜವಳಗಿ, ಪ್ರವೀಣಕುಮಾರ ಬಬಲಾದಿ, ರೋಹಿಣಿ ರತ್ನಾಕರ್, ಸುನೀಲುಮಾರ, ಅನುರಾಧಾ, ಶಿವಲೀಲಾ ಎಸ್., ಪಾರ್ವತಿ ಎಂ., ಪ್ರತಿಭಾ ಎಲ್., ಸುಜಾತಾ, ಭಾಗ್ಯಶ್ರೀ, ಅಂಬಿಕಾ ಸೇರಿದಂತೆ ಮಕ್ಕಳು, ಶಿಕ್ಷಕರು ಭಾಗವಹಿಸಿದ್ದರು.