ಸಾಹಿತಿ ಪ್ರೊ|| ವಸಂತ ಕುಷ್ಟಗಿ ಅವರಿಗೆ ನುಡಿನಮನ

ಬಳ್ಳಾರಿ 07 : ಇತ್ತೀಚೆಗೆ ನಿಧನರಾದ ಕನ್ನಡದ ಹಿರಿಯ ಸಾಹಿತಿ ಪ್ರೊ|| ವಸಂತ ಕುಷ್ಟಗಿ ಅವರಿಗೆ ನಗರದ ವೀ.ವಿ. ಸಂಘದ ಸ್ವತಂತ್ರ ಪ.ಪೂ. ಕಾಲೇಜಿನಲ್ಲಿ ಆನ್ಲೈನ್ ಮೂಲಕ ನುಡಿನಮನ ಕಾರ್ಯಕ್ರಮ ಆಯೋಜಿಸಿತ್ತು.
ಇದರಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಾಹಿತಿ ಟಿ.ಕೆ. ಗಂಗಾಧರ ಪತ್ತಾರ ಅವರು, ವಸಂತ ಕುಷ್ಟಗಿ ಅವರೊಂದಿಗೆ ತಮ್ಮ ಸಾಹಿತ್ಯದ ಒಡನಾಟ ಅವರ ಬದುಕು ಬರಹ ಸಾಧನೆ ಸಿದ್ದಿಗಳನ್ನ ನೆನಪಿಸಿಕೊಂಡರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡ ಸಾಹಿತ್ಯದ ವಾತಾವರಣ ನಿರ್ಮಿಸಿದವರಲ್ಲಿ ಕುಷ್ಟಗಿಯವರ ಪಾತ್ರ ಹಿರಿದು ಎಂದರು.
ಕವಯಿತ್ರಿ ಎ.ಎಂ. ಜಯಶ್ರೀ ಅವರು ವಸಂತ ಕುಷ್ಟಗಿ ಅವರ ವ್ಯಕ್ತಿತ್ವವನ್ನು ” ತಮ್ಮ ಸ್ವರಚಿತ ಕವಿತೆ ‘ಬಿಸಿಲ ಬದುಕಿನೊಳಗೆ ಹಸಿರಿನ ವಸಂತ’ ಎಂದು ಬಣ್ಣಿಸಿದರು ಹಾಗೆಯೇ, ಕುಷ್ಟಗಿ ಅವರ ಪ್ರಸಿದ್ಧ ಕವಿತೆಯಾದ ‘ಇಳೆ ಕಾಮನ ಬಿಲ್ಲು’ ಎಂಬ ಕವಿತೆಯನ್ನು ವಾಚಿಸುವ ಮೂಲಕ ಅವರಿಗೆ ಭಾವಪೂರ್ಣ ನುಡಿ ನಮನ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಮಂಜುನಾಥ, ತಮ್ಮನುಡಿ ನಮನದಲ್ಲಿ ಕುಷ್ಟಗಿ ಅವರು ತಮ್ಮ ಮದುವೆಗೆ ಆಗಮಿಸಿ ದಂಪತಿಗಳನ್ನ ಆಶೀರ್ದಿಸಿದ ಆ ಕ್ಷಣ ನನ್ನ ಪಾಲಿನ ಅಮೃತ ಘಳಿಗೆ ಎಂದು ಸ್ಮರಿಸಿಕೊಂಡರು. ಇವರ ಸರಳತೆ ಮಗುವಿನಂತ ಮನಸ್ಸು ನಮ್ಮೆಲ್ಲರಿಗು ಮಾದರಿಯಾಗಲಿ ಎಂದು ಹಾರೈಸಿದರು.
ಉಪನ್ಯಾಸಕ ಎಸ್. ಅರ್ಜನ್ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಶೋಭಾ ಪಾಟೀಲ್ ವಂದಿಸಿದರು. ಉಪನ್ಯಾಸಕ ಎ.ಎಂ.ಪಿ. ವೀರೇಶಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಸಿಬ್ಬಂದಿ ಹಾಗು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.