ಸಾಹಿತಿಗಳಿಂದಲೂ ರಾಜಕಾರಣ ದುರಂತ: ಡಾ.ಸಿ.ಪಿ.ಕೃಷ್ಣಕುಮಾರ್

ಸಂಜೆವಾಣಿ ನ್ಯೂಸ್
ಮೈಸೂರು.ಫೆ.25:- ಸಾಹಿತಿಗಳಲ್ಲಿ ಅನೇಕರು ರಾಜಕಾರಣಿ ಆಗಿಬಿಟ್ಟಿದ್ದಾರೆ. ವೃತ್ತಿಪರ ರಾಜಕಾರಣಿಗಳನ್ನು ಮೀರಿಸುವಂತೆ ಸಾಹಿತಿಗಳು ರಾಜಕಾರಣ ಮಾಡುತ್ತಿರುವುದು ದುರಂತದ ಸಂಗತಿ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ವಿಷಾದಿಸಿದರು.
ಮೈಸೂರು ವಿವಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ತಾರಾ ಪ್ರಕಾಶನ ಮತ್ತು ಶಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಡಾ.ಎನ್. ವಾಸಯ್ಯ ರಚಿಸಿರುವ ‘ಹಳ್ಳಿ ಹಕ್ಕಿ ಅಡಗೂರು ವಿಶ್ವನಾಥ್ ಅವರ ಸಾಹಿತ್ಯ ಮತ್ತು ರಾಜಕಾರಣ’ ಕೃತಿಯನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ರಾಜಕೀಯ ಕ್ಷೇತ್ರ ಪವಿತ್ರವಾದ ಕ್ಷೇತ್ರವಲ್ಲ. ಪ್ರಸ್ತುತ ಅಂತೂ ರಾಜಕೀಯ ಕ್ಷೇತ್ರವೂ ಸಂಪೂರ್ಣ ಕಲುಷಿತಗೊಂಡಿದೆ. ನಾನಾ ಕಾರಣಗಳಿಂದ ದೇಶ ಹೊತ್ತಿ ಉರಿಯುತ್ತಿದೆ. ರೆಸಾರ್ಟ್ ರಾಜಕೀಯ ಈಗಿನ ವಿದ್ಯಾಮಾನವಾಗಿದೆ ಎಂದು ಅವರು ತಿಳಿಸಿದರು.
ಎಚ್. ವಿಶ್ವನಾಥ್ ಅವರ ಸಾಹಿತಿ ಆಗಿದ್ದು, ದಾರಿತಪ್ಪಿ ರಾಜಕೀಯಕ್ಕೆ ಬಂದಿದ್ದಾರೆ ಅನಿಸುತ್ತದೆ. ಅವರು ಕೇವಲ ರಾಜಕಾರಣಿ ಮಾತ್ರವಲ್ಲ ಸ್ಟೇಟ್ಸ್ ಮ್ಯಾನ್. ವಾಸ್ತವಾಗಿ ವಿಶ್ವನಾಥ್ ಅವರು ಸಾಹಿತಿ ರಾಜಕಾರಣಿ. ಮೂಲಭೂತವಾಗಿ ಸಾಹಿತಿ ಆಗಿದ್ದು, 7 ಕೃತಿಗಳನ್ನು ರಚಿಸಿದ್ದಾರೆ. ಅವು ನಮನ ಯೋಗ್ಯ ಆಗಿರದಿದ್ದರೂ ಮನನ ಯೋಗ್ಯ ಕೃತಿಗಳಾಗಿವೆ ಎಂದು ಅವರು ಹೇಳಿದರು.
ಈ ಕೃತಿ ವಿಶ್ವನಾಥ್ ಅವರ ಬದುಕಿನ ಸಂಕೇತವಾಗಿದೆ. ವಿಶ್ವನಾಥ್ ಹಳ್ಳಿಯೊ ಅಥವಾ ನಗರದ್ದೊ ಹಕ್ಕಿ ಆಗಿರಬಗಹುದು. ಆದರೆ, ಇದು ಹಕ್ಕಿ ಮಾತ್ರವಾಗಿದ್ದು, ಹದ್ದಲ್ಲ, ರಣಹದ್ದಲ್ಲ. ಗುಬ್ಬಚ್ಚಿಯಂತಹ ಹಕ್ಕಿ ಆಗಿದೆ. ಸದ್ದಿಲ್ಲದೇ ಕೆಲಸ ಮಾಡುವ ಚೇತನವಾಗಿರುವ ವಿಶ್ವನಾಥ್ ಅವರು ಅಭಿವೃದ್ಧಿಪರ ರಾಜಕಾರಣಿಎಂದು ಅವರು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಮಾತನಾಡಿ, 2000ನೇ ಇಸವಿಯ ನಂತರ ರಾಜಕೀಯ ನಿರೂಪಣೆಯನ್ನು ಧರ್ಮೋರಾಜಕಾರಣ ಸಂಘಟನೆಗಳು ಮಾಡತೊಡಗಿವೆ. ಆದ್ಯತೆಗಳಲ್ಲದ ವಿಷಯಗಳನ್ನು ವೈಭವೀಕರಿಸುತ್ತಾ, ಗತಕಾಲದಲ್ಲೇ ಮೈಮರೆಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಿಲಿಯನ್ ಗಟ್ಟಲೆ ದುಡ್ಡು ಇರುವವರು, ಕಪ್ಪು ಹಣ ಉಳ್ಳವರು ರಾಜಕೀಯ ಪ್ರವೇಶ ಮಾಡಿದ್ದಾರೆ. ಹಣ ಬಲ- ತೋಳ್ಬಲಗಳ ಮಧ್ಯದಲ್ಲಿ ಪ್ರಜಾಪ್ರಭುತ್ವದ ಸೌಂದರ್ಯತೆ ಅವನತಿ ಹೊಂದುತ್ತಿದೆ. ಎದುರಿಗೆ ಇರುವವರನ್ನು ಟೀಕೆ ಮಾಡುವಾಗ ಜನನಾಯಕರು ಯೋಗ್ಯವಲ್ಲದ ಭಾಷೆಯನ್ನು ಬಳಸುತ್ತಿದ್ದಾರೆ. ಇದರಿಂದ ನಮ್ಮ ದೇಶದ ರಾಜಕೀಯ ಸಂಸ್ಕೃತಿ ನಾಶವಾಗುವತ್ತ ಹೊರಟಿದೆ ಎಂದು ಅವರು ವಿಷಾದಿಸಿದರು.
ದೇಶದಲ್ಲಿ ಮಾದರಿ ರಾಜಕಾರಣ ಮಾಡಿದಂತಹ ವ್ಯಕ್ತಿಗಳನ್ನು ಕುರಿತು ಅಧ್ಯಯನಾತ್ಮಕ ಪುಸ್ತಕಗಳು ಪ್ರಕಟವಾಗಬೇಕು. ಇದರಿಂದ ಮುಂದಿನ ಪೀಳಿಗೆಯ ರಾಜಕಾರಣಿಗಳಿಗೆ ರಾಜಕೀಯ ಕಲಿಕೆಗೆ ಹಾಗೂ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.
ಅಡಗೂರು ಎಚ್.ವಿಶ್ವನಾಥ್ ಮಾತನಾಡಿ,15ನೇ ಶತಮಾನದಲ್ಲಿಯೇ ಕುಮಾರವಾಸ್ಯನು ರಾಜಕಾರಣವನ್ನು ರಣಹದ್ದುಗಳಿಗೆ ಹೋಲಿಕೆ ಮಾಡಿದ್ದನು. ಈಗಲೂ ಆತನ ಹೇಳಿಕೆ ಪ್ರಸ್ತುತವಾಗಿದೆ. ನಮ್ನ ದೇಶದ ಇಂದಿನ ಸ್ಥಿತಿಯು ಹೀಗೆ ಮುಂದುವರೆದರೇ ಚುನಾವಣೆ, ಪ್ರಜಾಪ್ರಭುತ್ವ ಮರೆಯಾಗಿ ಸರ್ವಾಧಿಕಾರಿ ಆಡಳಿತ ಬರಬಹುದು. ಪಕ್ಷ ರಾಜಕಾರಣ ಮರೆಯಾಗುತ್ತಿದೆ. ವ್ಯಕ್ತಿ- ವ್ಯಕ್ತಿಗತ ರಾಜಕಾರಣ ವೈಭವೀಕರಿಸುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಮಾತನಾಡಿ, ದೃಷ್ಟಿಕೋನರಹಿತವಾಗುತ್ತಿರುವ ಇಂದಿನ ರಾಜಕಾರಣದಲ್ಲಿ ವಿಶ್ವನಾಥ್ ಅವರು ಸಚಿವರಾಗಿದ್ದ ಸಮಯದಲ್ಲಿ ಸಮಾಜಕ್ಕೆ ಬೇಕಾಗಿದ್ದ ಮೌಲ್ಯಯುತ ಯೋಜನೆಗಳನ್ನು ಜಾರಿಗೆ ತಂದರು ಎಂದು ನೆನಪು ಮಾಡಿದರು.
ಕೃತಿ ಕುರಿತು ಸಾಹಿತಿ ಶುಭದಾ ಪ್ರಸಾದ್ ಮಾತನಾಡಿದರು. ಕೃತಿಯ ಕರ್ತೃ ಡಾ.ಎನ್. ವಾಸಯ್ಯ ಇದ್ದರು. ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್ ಸ್ವಾಗತಿಸಿದರು.