ಸಾಹಿತಿಕ ದುಡಿಮೆಯಿಂದ ಕನ್ನಡ ವಿಶ್ವಮಾನ್ಯದೆಡೆಗೆ


ಧಾರವಾಡ,ನ.4: ಕರ್ನಾಟಕ ರಾಜ್ಯೋತ್ಸವವನ್ನು ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಮತ್ತು ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ‘ಐಕ್ಯೂಎಸಿ’ ಮತ್ತು ಕರ್ನಾಟಕ ಸಂಘದ ಸಹಯೋಗದೊಂದಿಗೆ ಜೆ.ಎಸ್.ಎಸ್. ಡಿ.ಆರ್.ಎಚ್. ಸಭಾಭವನದಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿಗಳಾದ ಡಾ. ಅಜಿತಪ್ರಸಾದ ಅವರು ಆಗಮಿಸಿ ಕರ್ನಾಟಕ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಾತನಾಡುತ್ತಾ ‘ಕರ್ನಾಟಕದ ಏಕೀಕರಣ, ನಾಡು-ನುಡಿ ಹಾಗೂ ಕರ್ನಾಟಕವನ್ನು ಕಟ್ಟುವಲ್ಲಿ ಹಲವಾರು ರಾಜ ಮನೆತನಗಳು, ಸಂಸ್ಥೆಗಳು, ಸಂಘಟನೆಗಳು ಜೊತೆಗೆ ಪ್ರಾಥಃಸ್ಮರಣಿಯರಾದ ಅರಟಾಳ ರುದ್ರಗೌಡ, ಡ್ಯೆಪ್ಯೂಟಿ ಚನ್ನಬಸಪ್ಪ, ರಾ.ಹ. ದೇಶಪಾಂಡೆ, ಆಲೂರ ವೆಂಕಟರಾಯ, ಹುಯಲಗೋಳ ನಾರಾಯಣರಾಯ, ರೊದ್ದಶ್ರೀನಿವಾಸ, ಶಾಂತರಸ, ಬಿ.ಎಂ.ಶ್ರೀಕಂಠಯ್ಯ ಮುಂತಾದ ಮಹನೀಯರ ಕಾರ್ಯತತ್ಪರತೆಯಿಂದ ಅವರ ಸಾಹಿತ್ಯಿಕ ದುಡಿಮೆಯಿಂದ ಕನ್ನಡ ಇಂದು ವಿಶ್ವಮಾನ್ಯತ್ವದೆಡೆಗೆ ಸಾಗಿದೆ. ಈಗಾಗಲೆ ನಮ್ಮ ಘನ ಕರ್ನಾಟಕ ಸರ್ಕಾರದ ಆದೇಶದಂತೆ ‘ಮಾತಾಡ್ ಮಾತಡ್ ಕನ್ನಡ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿ, ಕನ್ನಡದ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿರುವೆವು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಚಿಂತಕರಾದ ಶ್ರೀ ಶ್ರೀನಿವಾಸ ವಾಡಪ್ಪಿ ಅವರು ಕನ್ನಡ ನಾಡಿನ ಸಂಘಟನೆಗಳ ಕುರಿತು ಮಾತನಾಡುತ್ತಾ ‘ಕನ್ನಡ ನಾಡನ್ನು ಶ್ರೀಮಂತಗೊಳಿಸಿದ ಪಂಪ, ರನ್ನ, ಕುವೆಂಪು, ಬೇಂದ್ರೆ, ಕೆ.ಎಸ್. ನಿಸಾರ್ ಅಹ್ಮದರು ನಾಡು-ನುಡಿ-ಭಾಷೆಯ ಬಗೆಗಿನ ಚಿಂತನೆಯನ್ನು ಕುರಿತು ವಿಭಿನ್ನ ನೆಲೆಗಳಲ್ಲಿ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. (ಶ್ರೀಮತಿ.) ಇಂದು ಎಲ್. ಪಂಡಿತ ಅವರು ವಹಿಸಿಕೊಂಡು, ‘ನಾಡು-ನುಡಿ ಉಳಿವಿಗಾಗಿ, ಭಾಷೆಯ ರಕ್ಷಣೆಗಾಗಿ ನಾವು ನಮ್ಮ ಮನೆಯಿಂದ ರಕ್ಷಿಸುವ ಪಣತೊಡಬೇಕಿದೆ’ ಎಂದರು. ಕಾಲೇಜು ಅಭಿವೃದ್ಧಿ ಅಧಿಕಾರಿಗಳಾದ ಡಾ. ಸೂರಜ ಜೈನ, ಐಟಿಐ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಮಹಾವೀರ ಉಪಾದ್ಯೆ ಹಾಗೂ ಐಕ್ಯೂಎಸಿ ಸಂಯೋಜಕರಾದ ಡಾ. ವೆಂಕಟೇಶ ಮುತಾಲಿಕ, ಕರ್ನಾಟಕ ಸಂಘದ ಸಂಯೋಜಕರಾದ ಡಾ. ಆರ್.ವಿ. ಪಾಟೀಲ, ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಕು. ಪಲ್ಲವಿ ಹಾಗೂ ಸಂಗಡಿಗರು ನಿತ್ಯೋತ್ಸವ ಗೀತೆಯನ್ನು ಹಾಡಿದರು. ಕು. ಮೇಘನಾ ನಾಯಕ ಕಾರ್ಯಕ್ರಮವನ್ನು ನಿರೂಪಿಸಿದರು. ಕು. ಜಯಶ್ರೀ ಉಣಕಲ್ ವಂದಿಸಿದರು.