ಸಾವು ಗೆದ್ದ ಸಾತ್ವಿಕ್

ವಿಜಯಪುರ,ಏ.4-ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಆಟವಾಡುತ್ತ ಹೋಗಿ ಕೊಳವೆ ಬಾವಿಯೊಳಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಎರಡು ವರ್ಷದ ಮಗು ಸಾತ್ವಿಕ್ ಕೊನೆಗೂ ಸಾವನ್ನು ಗೆದ್ದು ಹೊರ ಬಂದಿದ್ದಾನೆ.
ಎನ್‍ಡಿಆರ್‍ಎಫ್, ಎಸ್‍ಟಿಆರ್‍ಎಫ್ ನಡೆಸಿದ ಸುಮಾರು 20 ಗಂಟೆಗಳ ಕಾರ್ಯಾಚರಣೆ ಮತ್ತು ಮಗು ಸುರಕ್ಷಿತವಾಗಿ ಬದುಕಿ ಹೊರಬರಲಿ ಎಂಬ ಸಹಸ್ರಾರು ಜನರ ಪ್ರಾರ್ಥನೆ ಕೊನೆಗೂ ಫಲ ನೀಡಿದೆ.
ಲಚ್ಯಾಣ ಗ್ರಾಮದ ತೋಟದ ಮನೆಯ ಮುಂದಿನ ಜಾಗೆಯಲ್ಲಿ ಆಟವಾಡುತ್ತಿದ್ದ ಸಾತ್ವಿಕ್ ಸತೀಶ್ ಮುಜಗೊಂಡ (2) ಎಂಬ ಬಾಲಕ ತಂದೆ-ತಾಯಿ, ಅಜ್ಜ-ಅಜ್ಜಿ ಕೃಷಿ ಚಟುವಟಿಕೆಯಲ್ಲಿ ಮಗ್ನರಾಗಿದ್ದ ವೇಳೆ ಆಟವಾಡುತ್ತ ಹೋಗಿ ವಿಫಲಗೊಂಡ ತೆರೆದ ಕೊಳವೆ ಬಾವಿಯಲ್ಲಿ ಬಿದ್ದಿದ್ದ. ಮಗು ಕಾಣದೇ ಇದ್ದಾಗ ಮಗುವನ್ನು ಸುತ್ತೆಲ್ಲ ಹುಡುಕಾಡಿ ಸಂಶಯಗೊಂಡ ತೊರೆದ ಕೊಳವೆ ಬಾವಿಯೊಳಗೆ ಟಾರ್ಚ್ ಹಿಡಿದು ನೋಡಿದ್ದಾರೆ. ಆಗ ಮಗು ತಲೆ ಕೆಳಗಾಗಿ ಕೊಳವೆ ಬಾವಿಯೊಳಗೆ ಬಿದ್ದಿರುವುದು ಕಂಡು ಬಂದಿತ್ತು. ಮನೆಯವರು ಎದೆಯೊಡೆದು ತಕ್ಷಣವೇ ಗ್ರಾಮ ಪಂಚಾಯತಿಗೆ ಸುದ್ದಿ ಮುಟ್ಟಿಸಿದ್ದು, ತಡಮಾಡದೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.
ಸಂಜೆ 6 ಗಂಟೆ ಆಗುತ್ತಿದ್ದಂತೆಯೇ ಸಾತ್ವಿಕ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು 15-20 ಅಡಿ ಆಳದಲ್ಲಿ ಮಗು ತಲೆ ಕೆಳಗಾಗಿ ಬಿದ್ದಿದ್ದ ಮಗುವಿಗೆ ಆಕ್ಸಿಜನ್ ಪೂರೈಕೆ ಮಾಡಲಾಗಿತ್ತು. ಎನ್‍ಡಿಆರ್‍ಎಫ್, ಎಸ್‍ಟಿಆರ್‍ಎಫ್ ತಂಡ ಕಳೆದ 20 ತಾಸುಗಳಿಂದ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿತು. ಕೊನೆಗೆ ಕೊಳವೆ ಬಾವಿಗೆ ಸಮಾನಾಂತರವಾಗಿ ರಂಧ್ರ ಕೊರೆಯಲಾಗಿದು, ಮಗುವಿಗೆ ಅಡ್ಡಲಾಗಿದ್ದ ಬಂಡೆಗಲ್ಲು ತೆರವುಗೊಳಿಸಿ ಮಗುವನ್ನು ರಕ್ಷಣೆ ಮಾಡಲಾಗಿದೆ.
ಲಚ್ಯಾಣ ಸದ್ಗುರು ಸಿದ್ದಲಿಂಗ ಮಹಾರಾಜರ ದೇವಸ್ಥಾನ ಸೇರಿದಂತೆ ರಾಜ್ಯದ ಎಲ್ಲೆಡೆ ಬದುಕಿ ಬಾ ಸಾತ್ವಿಕ ಎಂದು ಜನರು ದೇವರ ಮೊರೆ ಹೋಗಿದ್ದರು. ಜನರ ಮೊರೆಗೆ ಭಗವಂತ ಓಗೊಟ್ಟಿದ್ದಾನೆ. ಮಗು ಜೀವಂತವಾಗಿ ಹೊರ ಬಂದಿದೆ.
ಕಾರ್ಯಾಚರಣೆಯಲ್ಲಿ 2 ಜೆಸಿಬಿ, 2 ಹಿಟಾಚಿ, 2 ಬ್ಲಾಸ್ಟಿಂಗ್ ಯಂತ್ರಗಳನ್ನು ಬಳಸಲಾಗಿತ್ತು. ಸಹಸ್ರಾರು ಮಂದಿ ಕಾರ್ಯಾಚರಣೆ ವೀಕ್ಷಣೆಗೆ ತಂಡೋಪ ತಂಡವಾಗಿ ಆಗಮಿಸಿದ್ದರು. ಜಿಲ್ಲಾಧಿಕಾರಿ ಟಿ. ಭೂಬಾಲನ್, ಎಸ್ಪಿ ಋಷಿಕೇಶ ಸೋನಾವಣೆ, ಜಿ.ಪಂ. ಸಿಇಒ ರಿಶಿ ಆನಂದ ಮತ್ತಿತರ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟು ಮಗುವಿನ ರಕ್ಷಣಾ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.