ಸಾವಿರ ಮತಗಳಿಂದ ನನ್ನ ಗೆಲುವು ನಿಶ್ಚಿತ

ರಾಯಚೂರು.ನ.೨೩- ವಿಧಾನ ಪರಿಷತ್ ಚುನಾವಣೆಯಲ್ಲಿ ಒಂದು ಸಾವಿರ ಮತಗಳಿಂದ ನಾನು ಗೆಲ್ಲುತ್ತೇನೆ ಎನ್ನುವ ಆತ್ಮವಿಶ್ವಾಸವನ್ನು ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಬಯ್ಯಾಪೂರು ಅವರು ವ್ಯಕ್ತಪಡಿಸಿದರು.
ಅವರು ಎಐಸಿಸಿ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿದ ನಂತರ ಇಂದು ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ಕೊಪ್ಪಳ ಮತ್ತು ರಾಯಚೂರು ಎರಡು ಜಿಲ್ಲೆಗಳಲ್ಲಿ ಅವರು ಯಾರು ಎನ್ನುವುದೇ ಗೊತ್ತಿಲ್ಲ. ಆದರೂ, ನಾನು ಚುನಾವಣೆಯನ್ನು ಅತ್ಯಂತ ಪರಿಶ್ರಮದಿಂದ ನಿರ್ವಹಿಸುತ್ತೇವೆ. ನನ್ನ ಪಕ್ಷದ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ನನ್ನನ್ನು ಗೆಲ್ಲಿಸುತ್ತಾರೆಂಬ ವಿಶ್ವಾಸ ನನಗಿದೆ. ಬಿಜೆಪಿ ಯಾರಿಗೆ ಟಿಕೆಟ್ ನೀಡಬೇಕೆನ್ನುವುದು ಆ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆದರೆ, ಈ ಚುನಾವಣೆಯಲ್ಲಿ ನಾನು ಗೆಲ್ಲುವುದು ಮಾತ್ರ ನಿಶ್ಚಿತವೆಂದರು.
ನಾನು ಈ ಹಿಂದೆ ಐದು ಚುನಾವಣೆ ನಿರ್ವಹಿಸಿದ್ದೇನೆ. ಎರಡು ಸಲ ಟಿಕೆಟ್ ಕೇಳಿದ್ದೆ. ಆದರೆ. ಮುಂದೆ ನೋಡೋಣಾವೆಂದು ಹೇಳಿದ್ದರು. ಈ ಅವಕಾಶ ನನಗೆ ಸರ್ವಾನುಮತದಿಂದ ಬೆಂಬಲಿಸುವ ಮೂಲಕ ಟಿಕೆಟ್ ನೀಡಿದ್ದಾರೆ. ಗೆಲ್ಲಿಸುವ ಭರವಸೆಯನ್ನು ನನಗೆ ನೀಡಿದ್ದಾರೆ. ಸುಮ್ಮನೆ ಒಂದು ಪಟ್ಟಿ ಮಾಡಿ, ೩೬೦೦ ಮತಗಳು ಬಿಜೆಪಿಗೆ ಇದೆಂದು ಹೇಳುವುದರಲ್ಲಿ ಅರ್ಥವಿಲ್ಲ. ಯಾರಿಗೆ ಎಷ್ಟು ಬೆಂಬಲವಿದೆ ಎನ್ನುವುದು ಡಿಸೆಂಬರ್ ೧೪ ರಂದು ಸ್ಪಷ್ಟಗೊಳ್ಳುತ್ತದೆ. ಬಿಜೆಪಿ ಸರ್ಕಾರದ ಬೆಲೆ ಏರಿಕೆ ಮತ್ತು ರೈತ ವಿರೋಧಿ ನೀತಿ, ಬೆಳೆ ನಷ್ಟದಿಂದ ಬಾಧಿತಗೊಂಡ ರೈತರ ಸಮಸ್ಯೆ ಕೇಳುವವರಿಲ್ಲ. ಜಿಲ್ಲೆಗೊಂದು ಸಚಿವ ಸ್ಥಾನವಿಲ್ಲ. ಈ ಎಲ್ಲಾ ವಿರೋಧ ನನಗೆ ಅನುಕೂಲವಾಗುತ್ತದೆ. ಯಾರನ್ನು ನಂಬಿ ಇವರು ಬಿಜೆಪಿಗೆ ಮತ ಹಾಕುತ್ತಾರೆಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಶಾಸಕ ದದ್ದಲ ಬಸವನಗೌಡ, ಕರಿಯಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.