ಸಾವಿರ ಗೋವುಗಳನ್ನು ಸಾಕಿ, ಗೋಮಾತೆಯನ್ನು ಸಂರಕ್ಷಿಸಿದ ಗೋಪಾಲದೇವ : ಸಂಸದ ಜಾಧವ

ಕಾಳಗಿ. ನ.7 : ಗೋವುಗಳೆಂದರೆ ಮನುಷ್ಯನಿಗೆ ಕಾಮಧೇನು ಕಲ್ಪವೃಕ್ಷವಿದ್ದಂತೆ, ಗೋವಿನ ಹಾಲು ಮಕ್ಕಳಿಗೆ ಅಮೃತ ಸಮಾನವಾಗಿದ್ದು, ಹುಟ್ಟಿರುವ ಚಿಕ್ಕಮಕ್ಕಳಿಗೆ ಗೋವಿನ ಮೂತ್ರದಿಂದ ಸ್ಥಾನ ಮಾಡಿಸಿದ್ದೇಯಾದರೆ ಆ ಮಗುವಿಗೆ ಇಡೀ ಜೀವಮಾನದಲ್ಲಿ ಚರ್ಮರೋಗ ಬರುವುದಿಲ್ಲ. ಗೋವಿಂದ ಹಾಲು ಕರೆಯುವ ಕೈಗಳು ರೋಗ ಮುಕ್ತವಾಗಿರುತ್ತದೆ ಎಂದು ಸಂಸದ ಡಾ.ಉಮೇಶ ಜಾಧವ ತಿಳಿಸಿದರು.

ಕರ್ನಾಟಕ ಸರ್ಕಾರದ ವತಿಯಿಂದ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿ ಇಲಾಖೆಯ ವತಿಯಿಂದ ದೀಪಾವಳಿ ಹಬ್ಬದಂದು ಶುಕ್ರವಾರ ತಾಲೂಕಿನ ಸುಕ್ಷೇತ್ರ ರೇವಗ್ಗಿ (ರಟಕಲ್ ) ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಗೋಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಗೋಶಕ್ತಿಯನ್ನರಿತ ನಮ್ಮ ತಂದೆ ಗೋಪಾಲದೇವ ಜಾಧವ ಅವರು, ಸಾವಿರ ಗೋವುಗಳನ್ನು ಸಾಕಿ, ಸಂರಕ್ಷಿಸಿ ಗೋಮಾತೆಯನ್ನು ಪ್ರತಿನಿತ್ಯ ಪೂಜಿಸುವ ಪರಿಪಾಠವನ್ನು ನಮಗೆ ಚಿಕ್ಕಂದಿನಿಂದಲೇ ತಿಳಿಸಿ ಕೊಟ್ಟಿರುವುದರಿಂದ ಇದುವರೆಗೂ ನಮ್ಮ ಕುಟುಂಬದಲ್ಲಿ ಗೋವನ್ನು ಪೂಜಿಸುವ ಸಂಪ್ರದಾಯವಿದೆ ಎಂದ ಅವರು, ಗೋಮಾತೆಯ ಪೂಜೆಯಿಂದ ನಾವು ತಿಳಿಯದೆ ಮಾಡಿರುವ ಪಾಪ ಕರ್ಮಗಳನ್ನು ಪಾರಾಗುತ್ತವೆ ಎಂದರು. ಹಿಂದಿನ ಸಮಯ ನಮ್ಮ ಮನೆಗಳಲ್ಲಿ ಗೋವಿನ ಸೇಗಣಿಯಿಂದ ಮನೆಯನ್ನು ತೊಳೆಯುವ ಪದ್ಧತಿಯಿತ್ತು. ಗೋವಿನ ಸೇಗಣಿಯಿಂದ ತೋಳೆದ ಮನೆಯಲ್ಲಿ ಮಲಗಿದರೆ ಆರೋಗ್ಯದಲ್ಲಿ ಉತ್ತಮ ಬದಲಾವಣೆ ಕಂಡಿರುವುದು ವೈಜ್ಞಾನಿಕ ಸತ್ಯವಾಗಿದೆ ಎಂದರು.

ಪ್ರಸಕ್ತ ವಿದ್ಯಮಾನಗಳಲ್ಲಿ ಗೋವುಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದ್ದು, ನೋವಿನ ಸಂಗತಿಯಾಗಿದೆ. ಸ್ವಾತಂತ್ರ ಪೂರ್ವದಲ್ಲಿ ನಮ್ಮ ದೇಶದಲ್ಲಿ50 ಕೋಟಿ ಪಶುಗಳಿದ್ದವು. ಸದ್ಯ 3 ಕೋಟಿ ಮಾತ್ರ ಉಳಿದಿವೆ. ಕಾರಣ ಪ್ರತಿಯೊಬ್ಬರು ಗೋವುಗಳನ್ನು ಸಾಕಿ ಆರೋಗ್ಯವೃದ್ಧಿಸಿ ಕೊಳ್ಳುವಂತೆ ಜನತೆಗೆ ತಿಳಿಸಿದ ಸಂಸದರು, ಪೌಡರ್ ಹಾಲು ಕುಡಿಯುವುದನ್ನು ಬಿಟ್ಟು, ಪೌಷ್ಟಿಕವಾದ ದೇಶಿಯ ಆಕಳ ಹಾಲು ಕುಡಿಯುವ ಪದ್ಧತಿ ರೂಡಿಸಿಕೊಳ್ಳಬೇಕು ಎಂದರು.

ಕಲಬುರ್ಗಿಯ ಪೂಜ್ಯ ಲಿಂಗರಾಜಪ್ಪ ಅಪ್ಪನವರು ಮಾತನಾಡಿ, ಭಾರತ ದೇಶದ ಸಂಸ್ಕøತಿಯಲ್ಲಿ ನಮ್ಮನ್ನು ಜನ್ಮ ಕೊಟ್ಟ ತಾಯಿಯನ್ನ ಎಷ್ಟು ಪೂಜ್ಯತೆಯಿಂದ ಕಾಣುತ್ತೇವೆಯೋ ಅಷ್ಟೇ ಪೂಜ್ಯ ಭಾವನೆಯಿಂದ ನಾವುಗಳೆಲ್ಲರೂ ಗೋಮಾತೆಯನ್ನು ಅಷ್ಟೇ ಪೂಜ್ಯ ಭಾವನೆಯಿಂದ ಆರಾಧಿಸಬೇಕು ಎಂದರು. ಸರ್ಕಾರದ ಆದೇಶವಿದೆ ಎಂಬ ಮಾತ್ರಕ್ಕೆ ನಾವುಗಳು ಗೋವನ್ನು ಪೂಜಿಸಬಾರದು. ಸರ್ಕಾರ ಆದೇಶವಿರಲಿ, ಇಲ್ಲದಿರಲಿ ನಾವು ಗೋವನ್ನು ಪ್ರತಿನಿತ್ಯ ಪೂಜಿಸುವ ಹವ್ಯಾಸ ರೂಡಿಸಿಕೊಳ್ಳಬೇಕು. ಗೋವಿನ ಪೂಜೆಯಿಂದ ಮನುಷ್ಯನ ಮನಸ್ಸು ಪ್ರಸನ್ನತೆಕಡೆ ಸಾಗಿ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು. ನಮ್ಮ ಸನಾತನ ಸಂಸ್ಕೃತಿಯಲ್ಲಿ ಗೋವಿಗೆ ಪ್ರಮುಖಸ್ಥಾನವಿದ್ದು, ಗೋವನ್ನು ‘ನಡೆದಾಡುವ ಆಸ್ಪತ್ರೆ ‘ ಎನ್ನಲಾಗಿದೆ ಎಂದರು.

ಶಾಸಕ ದಂಪತಿಗಳಿಂದ ಗೋವಿಗೆ ವಿಶೇಷ ಪೂಜೆ : ಪಂಚ ಪೂಜ್ಯರ ಸಮ್ಮುಖದಲ್ಲಿ ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ ಹಾಗೂ ಮಡದಿ ಮೇಘನಾ ಸೇರಿಕೊಂಡು ಗೋವುಗಳಿಗೆ ವಿಶೇಷ ಪೂಜೆಗೈದು, ನಾನಾ ಬಗೆಯ ಹಣ್ಣುಗಳು, ಆಹಾರ ಧಾನ್ಯಗಳನ್ನು ಗೋವುಗಳಿಗೆ ಉಣಬಡಿಸಿ, ಗೋಮಾತೆಯ ಆಶೀರ್ವಾದ ಪಡೆದುಕೊಂಡರು.

ನನ್ನ ಮತಕ್ಷೇತ್ರದ ಪುಣ್ಯತಾಣವಾಗಿರುವ ರೇವಗ್ಗಿ (ರಟಕಲ್ ) ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಗುಡ್ಡ- ಗಾಡಿನಲ್ಲಿ, ತಾತ ಗೋಪಾಲದೇವ ಜಾಧವ ಅವರು, ಸಾವಿರ ಗೋವುಗಳು ಸಾಕಿ, ಸೇಗಣಿ ಪೂಜೆ ಮಾಡಿದ್ದಾರೆ. ಆ ನೆನಪಿಗಾಗಿ ನಮ್ಮ ಕುಟುಂಬ ಪ್ರತಿ ದೀಪಾವಳಿ ಹಬ್ಬಕ್ಕೆ ಗೋಸಗಣಿಯ ಪೂಜೆ ಮಾಡುತ್ತೇವೆ. ಈ ದೇವಸ್ಥಾನದಾವರಣದಲ್ಲಿ ನಾನು ಗೋಶಾಲೆ ಪ್ರಾರಂಭಿಸಿದ್ದು, ನನಗೆ ಸಂತೋಷ ತಂದಿದೆ ಎಂದರು.

ಹೊನ್ನಕಿರಣಗಿಯ ಪೂಜ್ಯ ಚಂದ್ರಗುಂಡ ಶ್ರೀಗಳು, ಸೂಗುರ (ಕೆ ) ಚನ್ನರುದ್ರಮುನಿ ಶ್ರೀಗಳು, ಶಾಸಕ ಡಾ.ಅವಿನಾಶ ಜಾಧವ, ಸೇಡಂ ಸಹಾಯಕ ಆಯುಕ್ತರಾದ ಬಸವರಾಜ ಬೆಣ್ಣೆಸಿರೂರು, ಗ್ರೇಡ್ -2 ತಹಸಿಲ್ದಾರ ಸಿದ್ರಾಮ ಮಾತನಾಡಿದರು.

ರಟಕಲ್ ರೇವಣಸಿದ್ಧ ಶ್ರೀಗಳು, ಮುರುಗೇಂದ್ರ ಶ್ರೀಗಳು, ಚಂದನಕೇರಿ ಶ್ರೀಗಳು, ದೇವಸ್ಥಾನ ಸಂಸ್ಥಾನಿಕ ಚನ್ನಬಸಪ್ಪ ದೇವರಮನಿ, ಪ್ರಮುಖರಾದ ಶಿವರಾಜ ಪಾಟೀಲ ಗೋಣಗಿ, ಅರಣಕಲ್ ಗ್ರಾಪಂ. ಅಧ್ಯಕ್ಷ ದಶರಥ ಮಾಕನ,ಕಂದಗೋಳ ಗ್ರಾಪಂ. ಅಧ್ಯಕ್ಷ ವೀರೇಶ ಮಾನಕರ, ಸುಭಾಷ ಕಾಂಬಳೆ, ಮಾತಾರ್ಂಡ ಶಾಸ್ತ್ರಿ, ದೇವಸ್ಥಾನ ಕಾರ್ಯದರ್ಶಿ ಮಂಜುನಾಥ ನಾವಿ, ರಾಜಶೇಖರ ಗುಡದಾ, ಇಮ್ತಿಯಾಜ್ ಪಟೇಲ್, ಮಹೇಂದ್ರ ಪೂಜಾರಿ, ಮಲ್ಲು ಮರಗುತ್ತಿ, ಕಂದಾಯ ನೀರಿಕ್ಷಕ ರವೀಂದ್ರನಾಥ ಗೋಟೂರ ಸೇರಿದಂತೆ ಅನೇಕರಿದ್ದರು.