
ದೇವದುರ್ಗ,ಮೇ.೨೧- ಪರಿಸರ ಉಳಿಸಿ ಬೆಳೆಸುವ ದೃಷ್ಟಿಯಿಂದ ಆರಣ್ಯ ಇಲಾಖೆ ಲಕ್ಷಾಂತರ ರೂ. ಖರ್ಚು ಮಾಡಿ ನೆಟ್ಟಿರುವ ಗಿಡಗಳು ಬೆಂಕಿಗೆ ಆಹುತಿಯಾಗುತ್ತಿವೆ. ರೈತರಿಗೆ ಅರಣ್ಯ ಇಲಾಖೆ ಜಾಗೃತಿ ಮೂಡಿಸದ ಕಾರಣ ರಸ್ತೆ ಅಕ್ಕಪಕ್ಕ ನೆಟ್ಟ ಸಸಿಗಳು ಹಾಳಾಗಿವೆ.
ಪಟ್ಟಣ ಸೇರಿ ತಾಲೂಕಿನ ಪ್ರಮುಖ ರಸ್ತೆಗಳು, ರಾಜ್ಯ ಹೆದ್ದಾರಿಯಲ್ಲಿ ಲಕ್ಷಾಂತರ ಗಿಡಗಳನ್ನು ಹಾಕಿದ್ದು, ಹಲವು ಹೆಮ್ಮರವಾಗಿ ಬೆಳೆದಿವೆ. ಆದರೆ, ರೈತರು ತಮ್ಮ ಜಮೀನು ಹಸನ ಮಾಡಲು ಬದುವು, ರಸ್ತೆಬದಿ ಮುಳ್ಳು, ಕಸ, ಕೃಷಿ ನಿರುಪಯುಕ್ತ ವಸ್ತುಗಳಿಗೆ ಬೆಂಕಿಹಾಕುತ್ತಿದ್ದಾರೆ. ಬೇಸಿಗೆ ಹಿನ್ನೆಲೆ ಕೆನ್ನಾಲಿ ರಸ್ತೆಪಕ್ಕದಲ್ಲಿ ಕಿಮೀವರೆಗೂ ಹರಡುತ್ತಿದೆ. ಇದರಿಂದ ರಸ್ತೆ ಎರಡೂಬದಿಗೆ ಹಾಕಿರುವ ಗಿಡಗಳು ಭಸ್ಮವಾಗುತ್ತಿವೆ.
ಹಲವು ವರ್ಷಗಳ ಹಿಂದೆ ಕಲ್ಮಲಾ ತಿಂಥಣಿ ರಾಜ್ಯ ಹೆದ್ದಾರಿಯಲ್ಲಿ ಸಾವಿರಾರು ಗಿಡಗಳನ್ನು ಹಾಕಲಾಗಿದ್ದು ಹಲವು ದೊಡ್ಡದಾಗಿ ಬೆಳೆದಿವೆ. ಒಣಗಿ ಹೋದ ಗಿಡಗಳ ಜಾಗದಲ್ಲಿ ಹೊಸಗಿಡಗಳನ್ನು ಹಾಕಲಾಗಿದೆ. ಹಲವುಕಡೆ ಬೆಂಕಿಗೆ ಹಾಳಾಗಿವೆ. ಇನ್ನು ದೇವದುರ್ಗ ಶಹಾಪುರ ರಸ್ತೆ, ಕೊಪ್ಪರ, ಗೂಗಲ್, ಅಮರಾಪುರದಿಂದ ಗಲಗ, ಮಸರಕಲ್ ಕ್ರಾಸ್‌ನಿಂದ ಸಿರವಾರ ರಸ್ತೆ, ಜಾಲಹಳ್ಳಿ ಗಲಗ ರಸ್ತೆ, ಜಾಲಹಳ್ಳಿ ಲಿಂಗದಹಳ್ಳಿ ಸೇರಿ ಹಲವು ಕಡೆ ರಸ್ತೆಯ ಎರಡೂ ಬದಿಗೆ ವಿವಿಧ ಬಗೆಯ ಗಿಡಗಳನ್ನು ಹಾಕಲಾಗಿದೆ.
ಅರಣ್ಯ ಇಲಾಖೆ ಸಸಿನೆಟ್ಟು ಎರಡ್ಮೂರು ವರ್ಷ ಕಾಳಜಿ ಮಾಡಿದೆ. ಗಿಡಗಳು ಎಂಟತ್ತು ಅಡಿ ಬೆಳೆದ ನಂತರ ಮರೆತುಬಿಡುತ್ತದೆ. ಇನ್ನು ಖಾಲಿ ಜಾಗ, ಅರಣ್ಯ ಪ್ರದೇಶದಲ್ಲಿ ಹಾಕಿರುವ ಗಿಡಗಳು ಕೂಡ ಕಾಳಜಿಯಿಲ್ಲದೆ ಹಾಳಾಗಿದೆ. ಅಚ್ಚಿದ ಗಿಡಗಳಲ್ಲಿ ಅರ್ಧದಷ್ಟು ದನಗಳ ಹಾವಳಿ, ನೀರಿನ ಕೊರತೆಯಿಂದ ಹಾಳಾಗಿದ್ದರೆ, ನೀರು ಸೇರಿ ಹಲವು ಸಮಸ್ಯೆ ನಡುವೆ ಬೆಳೆದ ಗಿಡಗಳು ಬೆಂಕಿಗಾಹುತಿಯಾಗುತ್ತಿವೆ.
ರೈತರು ಗ್ರಾಮೀಣ ಭಾಗದಲ್ಲಿ ಭತ್ತದ ಹುಲ್ಲು, ಮೇವು ಸಾಗಿಸಿದ್ದು ರಸ್ತೆಯ ಎರಡೂ ಬದಿಗೆ ಬೀಳುತ್ತಿದೆ. ಬೇಸಿಗೆಯಾಗಿರುವ ಕಾರಣ ಬಿಸಾಡಿದ ಬೀಡಿ ಸಿಗರೇಟ್‌ನಿಂದಲೂ ಬೆಂಕಿಹತ್ತಿಕೊಳ್ಳುತ್ತಿದೆ. ಅದರಲ್ಲೂ ಹೂವಿನಹೆಡಗಿ ರಸ್ತೆ, ಕೊಪ್ಪರ ರಸ್ತೆ, ಯರಮಸಾಳ, ಅಮರಾಪುರ, ಗಲಗ ರಸ್ತೆಯಲ್ಲಿ ಬೆಂಕಿಹಚ್ಚಿದ್ದರಿಂದ ಅರ್ಧಕಿಮೀನಿಂದ ಒಂದೆರಡು ಕಿಮೀವರೆಗೆ ಬೆಂಕಿ ತಗುಲಿದೆ. ಇದರಿಂದ ಹಲವು ಗಿಡಗಳು, ಕೆಲಕಡೆ ದೊಡ್ಡ ಮರಗಳು ಕೂಡ ಸುಟ್ಟುಕರಕಲಾಗಿವೆ.
ಜಾಗೃತಿ ಮರೆತ ಇಲಾಖೆ
ಅರಣ್ಯ ಇಲಾಖೆ ಮಳೆಗಾಲದಲ್ಲಿ ಸಸಿಗಳನ್ನು ನೆಟ್ಟು ನಂತರ ಮರೆತುಬಿಡುತ್ತಿದೆ. ಮಳೆಗಾಲ ಮುಗಿದ ನಂತರ ಗಿಡಗಳಿಗೆ ನೀರುಹಾಕುವ, ಮುಳ್ಳಿನ ಬೇಲಿ, ತಂತಿಕಟ್ಟುವುದು ಕೈಬಿಟ್ಟಿದೆ. ಇದರಿಂದ ಹಲವು ಗಿಡಗಳು ನೆಲಕ್ಕೆಬಿದ್ದರೆ ಇನ್ನು ಕೆಲವು ಜಾನುವಾರು, ಆಡು, ಕುರಿಗಳಿಗೆ ಆಹಾರವಾಗಿವೆ. ಬೇಸಿಗೆಗೆ ಮುನ್ನ ರೈತರಿಗೆ ಬೆಂಕಿಹಚ್ಚದಂತೆ ಅರಿವು ಮೂಡಿಸಬೇಕಿದೆ. ಈ ಹಿಂದೆ ಪತ್ರಿಕೆ ಮೂಲಕ ಸಲಹೆ ಸೂಚನೆ ನೀಡಲಾಗುತ್ತಿತ್ತು. ರಸ್ತೆ ಅಕ್ಕಪಕ್ಕದ ರೈತರಿಗೆ ಅರಿವು ಮೂಡಿಸಲಾಗುತ್ತಿತ್ತು. ಈಗ ಅರಣ್ಯ ಇಲಾಖೆ ಸಸಿ ನೆಡುವುದಕ್ಕೆ ಮಾತ್ರ ಸೀಮಿತವಾಗಿದೆ
ಕೋಟ್====
ಬೇಸಿಗೆಯಲ್ಲಿ ರೈತರು ರಸ್ತೆ ಅಕ್ಕಪಕ್ಕದ ತಮ್ಮಬದುಗಳನ್ನು ಸ್ವಚ್ಛ ಮಾಡಲು ಬೆಂಕಿಹಚ್ಚುತ್ತಿದ್ದಾರೆ. ಇದರಿಂದ ಗಿಡಗಳು ಹಾಳಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗುವುದು. ನೆಟ್ಟಿರುವ ಸಸಿಗಳಿಗೆ ಮುಳ್ಳಿನಬೇಲಿ ಕಟ್ಟಿ ರಕ್ಷಣೆ ಮಾಡಲು ಸಿಬ್ಬಂದಿಗೆ ಸೂಚಿಸುವೆ. ಹಾಳಾಗದ ಗಿಡಗಳ ಜಾಗದಲ್ಲಿ ಹೊಸಸಸಿ ನೆಡುತ್ತೇವೆ.
-ಅಲಿ ಉದ್ದೀನ್
ಆರ್‌ಎಫ್‌ಒ ಮಾನ್ವಿ ಅರಣ್ಯ ವಿಭಾಗ.
೨೧-ಡಿವಿಡಿ-೩,೪