ಭುವನೇಶ್ವರ,ಜೂ.೩- ಒಡಿಶಾದ ಬಾಲಾಸೋರ್‌ನಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಮೂರು ರೈಲುಗಳ ಮುಖಾಮುಖಿ ಭಯಾನಕ ರೈಲು ದುರಂತದಲ್ಲಿ ೨೮೮ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ೧ ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ,೧೨೦೦ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಅಪಘಾತದಿಂದಾಗಿ ಈ ಮಾರ್ಗದಲ್ಲಿ ೪೯ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.ರೈಲು ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಮೃತ ಕುಟುಂಬ ಸದಸ್ಯರಿಗೆ ಕೇಂದ್ರ ಸರ್ಕಾರ ೧೦ ಲಕ್ಷ ರೂ. ಪರಿಹಾರ ಘೋಷಿಸಿದೆ.ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹಾಗೂ ಸರಕು ಸಾಗಾಣಿಕ ರೈಲುಗಳ ನಡುವೆ ಸಂಭವಿಸಿದ ರೈಲು ದುರಂತ ದೇಶದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಅತಿದೊಡ್ಡ ರೈಲು ಅಪಘಾತವಾಗಿದೆ. ಸ್ಥಳದಲ್ಲಿ ರೈಲ್ವೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸೇರಿದಂತೆ ವಿವಿಧ ರಕ್ಷಣಾ ತಂಡಗಳ ರಕ್ಷಣಾ ಕಾರ್ಯವನ್ನು ಪೂರ್ಣಗೊಳಿಸಿವೆ.ಎರಡು ಪ್ರಯಾಣಿಕರ ರೈಲು ಮತ್ತು ಒಂದು ಸರಕು ಸಾಗಾಣೆ ರೈಲು ಡಿಕ್ಕಿ ಹಿನ್ನೆಲೆಯಲ್ಲಿ ಸ್ಥಳದಲ್ಲಿ ನೂರಕ್ಕೂ ಹೆಚ್ಚು ಮೊಬೈಲ್ ಅಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ರಕ್ಷಣಾ ತಂಡಗಳು ರೈಲಿನ ಬೋಗಿಗಳ ಅಡಿ ಸಿಲುಕಿದ ಮಂದಿಯ ಗಾಯಾಳುಗಳ ರಕ್ಷಣೆ ಭರದಿಂದ ಸಾಗಿದೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.
ರೈಲು ದುರಂತದ ಹಿನ್ನೆಲೆಯಲ್ಲಿ ಒಡಿಶಾ ಮತ್ತು ತಮಿಳುನಾಡಿನಲ್ಲಿ ಒಂದು ದಿನದ ಶೋಕಾಚರಣೆ ಘೋಷಿಸಲಾಗಿದೆ.ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭೇಟಿ ನೀಡಿ ಖುದ್ದು ಉಸ್ತುವಾರಿ ವಹಿಸಿದ್ದಾರೆ. ತಮಿಳುನಾಡು ಸಚಿರು ಭೇಟಿ ನೀಡಿದ್ದಾರೆ.
೨೦೦ಕ್ಕೂ ಹೆಚ್ಚು ಆಂಬ್ಯುಲೆನ್ಸ್:
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದ ರೈಲು ಅಪಘಾತದ ರಕ್ಷಣಾ ಸ್ಥಳಕ್ಕೆ ೨೦೦ ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆ ನೀಡಲು ೮೦ ವೈದ್ಯರನ್ನು ನಿಯೋಜನೆ ಮಾಡಲಾಗಿದೆ. ಇನ್ನೂ ೧೦೦ ಮಂದಿ ಹೆಚ್ಚುವರಿ ವೈದ್ಯರನ್ನು ಪರಿಹಾರ ಕಾರ್ಯಕ್ಕೆ ಬಳಸಿಕೊಳ್ಳಲಾಯಿತು.
ಜಖಂಗೊಂಡ ರೈಲುಗಳಲ್ಲಿ ಸಿಲುಕಿರುವ ಗಾಯಾಳುಗಳು ಹಾಗೂ ರೈಲಿನಲ್ಲಿ ಸಿಲುಕಿದ ಮಂದಿಯನ್ನು ಹೊರತೆಗೆಯಲಾಯಿತು.
ನಿನ್ನೆ ತಡರಾತ್ರಿ ಪಕ್ಕದ ಹಳಿಯಲ್ಲಿ ಒಂದು ಪ್ಯಾಸೆಂಜರ್ ರೈಲಿಗೆ ಮತ್ತೊಂದು ರೈಲು ಡಿಕ್ಕಿ ಹೊಡೆದು ಮೊದಲು ಹಳಿ ತಪ್ಪಿ, ಮತ್ತೊಂದು ರೈಲು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಅಪಘಾತದ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ೨೮೮ ಕ್ಕೆ ಏರಿಕೆಯಾಗಿದೆ ಎಂದು ಒಡಿಶಾ ಅಗ್ನಿಶಾಮಕ ಸೇವೆಗಳ ಮಹಾನಿರ್ದೇಶಕ ಸುಧಾಂಶು ಸಾರಂಗಿ ತಿಳಿಸಿದ್ದಾರೆ.
ಈ ಭೀಕರ ರೈಲು ದುರಂತ ನಿನ್ನೆ ರಾತ್ರಿ ಸಂಭವಿಸಿದ್ದು, ರಕ್ಷಣಾ ತಂಡಗಳು ನಿರಂತರ ಕಾರ್ಯಾಚರಣೆ ನಡೆಸಿ ಪರಿಹಾರ ಕಾರ್ಯಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ
ಮೂರು ರೈಲುಗಳು ಅಪಘಾತ ಸಂಭವಿಸಿದ ಸ್ಥಳಕ್ಕೆ ರೈಲ್ವೆಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಭಯಾನಕ ರೈಲು ದುರಂತ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಿದ್ದಾರೆ.ಇಂದು ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾಂiiಗಳನ್ನು ಪರಿಶೀಲಿಸಿದರು. ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಮಾಹಿತಿ ಪಡೆದುಕೊಂಡರು. ಪರಿಹಾರ ಕಾರ್ಯಗಳನ್ನು ಮತ್ತಷ್ಟು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಭೀಕರ ದುರಂತ, ರೈಲ್ವೆ, ಎನ್‌ಡಿಆರ್‌ಎಫ್, ಎಸ್‌ಬಿಆರ್‌ಎಫ್ ಮತ್ತು ರಾಜ್ಯಸರ್ಕಾರ ಜಂಟಿಯಾಗಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಹೇಳಿದರು.
ಮೃತ ಕುಟುಂಬ ಸದಸ್ಯರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ತಕ್ಷಣಕ್ಕೆ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಘಟನಾ ಸ್ಥಳದಲ್ಲಿ ಉರುಳಿ ಬಿದ್ದಿರುವ ಬೋಗಿಗಳನ್ನು ತೆರವುಗೊಳಿಸಿ ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲು ಪ್ರಯತ್ನಿಸಲಾಗುತ್ತಿದೆ ಎಂದರು.
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ರೈಲ್ವೆ ಸುರಕ್ಷತಾ ಆಯುಕ್ತರ ನೇತೃತ್ವದಲ್ಲಿ ಸ್ವತಂತ್ರ ತನಿಖೆಯನ್ನು ನಡೆಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
೪೦ಕ್ಕೂ ಹೆಚ್ಚು ರೈಲು ಸಂಚಾರ ರದ್ದು
ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ನಡುವೆ ಸಂಭವಿಸಿದ ರೈಲು ದುರಂತದ ಹಿನ್ನೆಲೆಯಲ್ಲಿ ೪೦ಕ್ಕೂ ಹೆಚ್ಚು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ರೈಲುಗಳ ಓಡಾಟಕ್ಕೆ ತೀವ್ರ ಅಡ್ಡಿಯುಂಟಾಗಿದೆ. ೪೯ ರೈಲುಗಳು ರದ್ದಾಗಿದ್ದು, ೩೮ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿರುವ ಹಿನ್ನೆಲೆಯಲ್ಲಿ ೨೦ ರೈಲುಗಳನ್ನು ತಾತ್ಕಾಲಿಕವಾಗಿ ನಿಲುಗಡೆ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಾರ್ಗದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗದ ಮೂಲಕ ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ತಲುಪಿಸುವ ಕೆಲಸ ನಡೆದಿದೆ.
ದಿನದ ಶೋಕಾಚರಣೆ
ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಗಾಡಿಗಳು ಹಳಿತಪ್ಪಿದರಿಂದ ಯಶವಂತಪುರದಿಂದ ಹೌರಾಕ್ಕೆ ಪ್ರಯಾಣಿಸುತ್ತಿದ್ದ ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು ಭೀಕರ ರೈಲು ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಒಂದು ದಿನದ ಶೋಕಾಚರಣೆ ಘೋಷಿಸಿದ್ದಾರೆ.ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ರಕ್ಷಣಾ ಉಸ್ತುವಾರಿ ವಹಿಸಿದ್ದಾರೆ
ಬದುಕುಳಿದ ಕೆಲವು ಪ್ರಯಾಣಿಕರನ್ನು ರಕ್ಷಣೆ ನಡೆದಿದೆ.೧೯೮೧ ರಲ್ಲಿ, ಬಿಹಾರದ ಚಂಡಮಾರುತದ ಸಮಯದಲ್ಲಿ ಕಿಕ್ಕಿರಿದ ಪ್ರಯಾಣಿಕರ ರೈಲು ಹಳಿಗಳಿಂದ ಮತ್ತು ನದಿಗೆ ಬಿದ್ದು ಕನಿಷ್ಠ ೮೦೦ ಮಂದಿ ಸಾವನ್ನಪ್ಪಿದ್ದರು.