ಸಾವಿನ ದವೆಡೆಯಲ್ಲಿದ ವ್ಯಕ್ತಿಯ ಪಾರು ಮಾಡಿದ ಮಹಿಳಾ ಪೊಲೀಸ್

ಚೆನ್ನೈ, ನ.೧೨-ಚೆನ್ನೈನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯ ನಡುವೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕಳುಹಿಸಿರುವ ಕಾರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ನಿನ್ನೆ ಟಿ.ಪಿ ಛತ್ರಂ ಠಾಣೆಯ ಇನ್ ಸ್ಪೆಕ್ಟರ್ ಇ. ರಾಜೇಶ್ವರಿ ಗಸ್ತು ಕರ್ತವ್ಯದಲ್ಲಿದ್ದರು. ಬೆಳಗ್ಗೆ ೮:೩೦ರ ಸುಮಾರಿಗೆ ಸ್ಮಶಾನದ ಬಳಿ ವ್ಯಕ್ತಿಯೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಅವರಿಗೆ ತಿಳಿದುಬಂತು. ತಕ್ಷಣ ಅಲ್ಲಿಗೆ ತೆರಳಿದ ಇನ್ಸ್ ಪೆಕ್ಟರ್ ರಾಜೇಶ್ವರಿ ಆತನನ್ನು ಹೆಗಲ ಮೇಲೆ ಹೊತ್ತು ಕೂಡಲೇ ಚಿಕಿತ್ಸೆಗಾಗಿ ಆ ವ್ಯಕ್ತಿಯನ್ನು ಆಟೋದಲ್ಲಿ ಸಮೀಪದ ಆಸ್ಪತ್ರೆಗೆ ಕಳುಹಿಸಲಾಯಿತು. ಆ ವ್ಯಕ್ತಿಯನ್ನು ಹೇಗಾದರೂ ಉಳಿಸಿ ಎಂದು ಮಹಿಳಾ ಪೊಲೀಸ್ ರಾಜೇಶ್ವರಿ ಆಟೋ ಚಾಲಕ ಹಾಗೂ ಇನ್ನಿತರರಲ್ಲಿ ವಿನಂತಿಸುವುದೂ ವೀಡಿಯೋದಲ್ಲಿ ದಾಖಲಾಗಿದೆ.
ಪೊಲೀಸರ ಪ್ರಕಾರ, ವ್ಯಕ್ತಿಯನ್ನು ಉದಯಕುಮಾರ್ (೨೮) ಎಂದು ಗುರುತಿಸಲಾಗಿದೆ. ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದ ಈತ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿದ್ದಾನೆ ಎಂದು ತಿಳಿದುಬಂದಿದೆ. ವಿಡಿಯೋ ಹೊರಬೀಳುತ್ತಿದ್ದಂತೆ ರಾಜೇಶ್ವರಿ ಅವರ ಸಮಯೋಚಿತ ಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ನಡುವೆ ಪ್ರತಿಕ್ರಿಯಿಸಿ ರಾಜೇಶ್ವರಿ, ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆ. ಯಾವುದೇ ಪ್ರತಿಫಲವನ್ನೂ ನಾನು ನಿರೀಕ್ಷಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಸ್ಟಾಲಿನ್ ಅಭಿನಂದನೆ
ಮಳೆ ಸಂಬಂಧಿತ ಅವಘಡದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಹೆಗಲ ಮೇಲೆ ಹೊತ್ತು ಸಾಗಿದ್ದ ಮಹಿಳಾ ಇನ್‌ಸ್ಪೆಕ್ಟರ್ ರಾಜೇಶ್ವರಿ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಭಿನಂದಿಸಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ತಮಿಳುನಾಡಿನಲ್ಲಿ ನಿರಂತವಾಗಿ ಮಳೆಯಾಗುತ್ತಿದೆ. ಇದರಿಂದಾಗಿ ಚೆನ್ನೈ ಮಹಾನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ವ್ಯಕ್ತಿಯೊಬ್ಬರನ್ನು ಮಹಿಳಾ ಇನ್‌ಸ್ಪೆಕ್ಟರ್ ರಾಜೇಶ್ವರಿ ಅವರು ಖುದ್ದು ತಾವೇ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.