ಸಾವಿತ್ರಿಬಾಪುಲೆ ಆದರ್ಶ ಮೈಗೂಡಿಸಿಕೊಳ್ಳಲು ಕರೆ

ತುಮಕೂರು, ಆ. ೧- ಸಮಾಜದಲ್ಲಿನ ಅನಕ್ಷರತೆ ದೂರವಾಗಬೇಕೆಂದರೆ ಎಲ್ಲರೂ ಅಕ್ಷರದವ್ವ ಸಾವಿತ್ರಿಬಾಫುಲೆ ಆದರ್ಶ ಮೈಗೂಡಿಸಿಕೊಳ್ಳಬೇಕಿದೆ ಎಂದು ನಿಕಟಪೂರ್ವ ಕಸಾಪ ಅಧ್ಯಕ್ಷೆ ಬಾ.ಹ. ರಮಾಕುಮಾರಿ ತಿಳಿಸಿದರು.
ನಗರದ ಕೃಷ್ಣ ಚಿತ್ರಮಂದಿರದಲ್ಲಿ ರಾಜ್ಯ ಸಾವಿತ್ರಿ ಬಾಫುಲೆ ಶಿಕ್ಷಕಿಯರ ಸಂಘದ ವತಿಯಿಂದ ಏರ್ಪಡಿಸಿದ್ದ ಸಾವಿತ್ರಿ ಬಾಫುಲೆ ಚಲನಚಿತ್ರ ವೀಕ್ಷಿಸಿದ ನಂತರ ಮಾತನಾಡಿದ ಅವರು, ಮನೋರಂಜನಾತ್ಮಕ ಚಿತ್ರಗಳ ನಡುವೆ ಸಾಮಾಜಿಕ ಸಂದೇಶಗಳನ್ನು ಸಾರುವ ಚಿತ್ರಗಳು ಇಂದಿನ ಸಮಾಜಕ್ಕೆ ಅವಶ್ಯಕತೆ ಇದೆ ಎಂದು ಹೇಳಿದರು.
ಮಕ್ಕಳಲ್ಲಿ ಸಾಮಾಜಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹ ಚಲನಚಿತ್ರಗಳ ವೀಕ್ಷಣೆಯನ್ನು ಮಕ್ಕಳಿಗೆ ಕಲ್ಪಿಸಬೇಕಿದೆ, ಅಕ್ಷರದ ಮಹತ್ವ ಅರಿವು ನಿಟ್ಟಿನಲ್ಲಿ ಇಂತಹ ಚಿತ್ರಗಳನ್ನು ಶಾಲಾ ಮಕ್ಕಳ ವೀಕ್ಷಣೆಗೆ ಅನುಕೂಲವಾಗುವಂತೆ ಕ್ರಮವಹಿಸಬೇಕು ಎಂದು ಹೇಳಿದರು.
ತಾರಾ ಅನುರಾಧ ಅವರು ಸಾಮಾಜಿಕ ಸಂದೇಶಗಳನ್ನು ಸಾರುವ ಹೆಬ್ಬೆಟ್ ರಾಮಕ್ಕನಂತಹ ಚಿತ್ರದಲ್ಲಿ ನಟಿಸಿದ್ದರು. ಈಗ ಸಾವಿತ್ರಿ ಬಾಫುಲೆಯಾಗಿ ಜೀವಿಸಿದ್ದಾರೆ, ಅಕ್ಷರ ಕ್ರಾಂತಿಯನ್ನು ಮೂಡಿಸಿದ ಸಾವಿತ್ರಿಬಾಫುಲೆಗಳ ಸಂಖ್ಯೆ ಹೆಚ್ಚಳವಾಗಬೇಕಿದೆ ಎಂದರು.
ತುಮಕೂರು ಬಿಇಒ ಹನುಮಾನಾಯ್ಕ್ ಅವರು ಮಾತನಾಡಿ, ಆಗಿನ ಕಾಲದಲ್ಲಿನ ಸತ್ಯಶೋಧಕ ಸಮಾಜ ಇಂದಿನ ಸಮಾಜಕ್ಕೂ ಅವಶ್ಯಕವಾಗಿದೆ ಸ್ವತಂತ್ರ್ಯ ಪಡೆದು ಇಷ್ಟು ವರ್ಷಗಳ ನಂತರವೂ ಸಮಾಜದಲ್ಲಿ ಮೌಢ್ಯತೆ, ಡಂಬಾಚಾರ ಜೀವಂತವಾಗಿದೆ, ಅದನ್ನು ದೂರವಾಗಿಸುವ ನಿಟ್ಟಿನಲ್ಲಿ ಸತ್ಯಶೋಧಕ ಸಮಾಜದಂತೆ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಸಿದ್ಧಲಿಂಗಪ್ಪ ಮಾತನಾಡಿ, ಸಮಾಜದಲ್ಲಿ ಸ್ತ್ರೀ ಮತ್ತು ಪುರುಷರ ಸಮಾನತೆಯನ್ನು ಸಾರಿದ ಜ್ಯೋತಿ ಬಾಫುಲೆ ಮತ್ತು ಸಾವಿತ್ರಿ ಬಾಫುಲ ಜೀವನ ಇಂದಿನ ಸಮಾಜಕ್ಕೆ ಅವಶ್ಯಕವಾಗಿದೆ, ಮಕ್ಕಳಿಗೆ ಪೋಷಕರು ಇಂತಹ ಚಿತ್ರವನ್ನು ತೋರಿಸುವ ಮೂಲಕ ಸಮಾಜ ಸ್ವಾಸ್ಥ್ಯ ಹೆಚ್ಚಳವಾಗಲಿದೆ ಎಂದು ಅಭಿಪ್ರಾಯಪಟ್ಟರು
ಪ್ರೊಬೇಷನರಿ ಕೆಎಎಸ್ ಅಧಿಕಾರಿ ಪ್ರತಿಭಾ ಮಾತನಾಡಿ, ಆಧುನಿಕ ಕಾಲದಲ್ಲಿ ಹೆಣ್ಣು ಮಕ್ಕಳು ಇಂದು ಮುನ್ನೆಲೆಯಲ್ಲಿ ಬರುವುದಕ್ಕೆ ಸಾವಿತ್ರಿ ಬಾಪುಲೆ ಕಾರಣ, ಅವಮಾನದ ನಡುವೆಯೇ ಬ್ರಿಟಿಷರ ಆಡಳಿತದಲ್ಲಿಯೇ ಶಿಕ್ಷಣ ಕಲಿಕೆಗೆ ಮುಂದಾಗಿದ್ದರಿಂದ ಇಂದು ಹೆಣ್ಣು ಮಕ್ಕಳು ಸಮಾಜದಲ್ಲಿ ಮುನ್ನಲೆಯಲ್ಲಿದ್ದಾರೆ ಎಂದರು.
ಸಮಾಜಕ್ಕೆ ಆಶಾದಾಯಕವಾಗಿರುವ ಸಂದೇಶವನ್ನು ಎಲ್ಲರು ವೀಕ್ಷಿಸಬಹುದಾಗಿದೆ, ಮಕ್ಕಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾವಿತ್ರಿ ಬಾಫುಲೆ ಅವರಂತಹ ಸಮಾಜ ಸುಧಾರಕರ ಬಗ್ಗೆ ಜನರಿಗೆ ತಿಳಿಸಬೇಕಿದೆ ಎಂದು ಹೇಳಿದರು.
ಸಾವಿತ್ರಿ ಬಾಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಅನುಸೂಯ ಮಾತನಾಡಿ, ಮಕ್ಕಳಿಗೆ ಪ್ರೇರಣೆ ನೀಡುವಂತಹ ಚಿತ್ರವನ್ನು ವೀಕ್ಷಣೆ ಮಾಡುವುದಕ್ಕೆ ಬಿಇಒ ಅನುಮತಿ ನೀಡಿದ್ದು, ದೇಶದ ಎಲ್ಲ ಮಹಿಳೆಯರಿಗೆ ಆದರ್ಶಯುತ ಪ್ರೇರಣೆ ಸಾವಿತ್ರಿಬಾಫುಲೆ ಅವರು, ಅವಮಾನದ ನಡುವೆ ಶಿಕ್ಷಣ ಪಡೆದಿದ್ದರಿಂದಲೇ ಇಂದು ಹೆಣ್ಣು ಮಕ್ಕಳು ಮುಂದಿದ್ದಾರೆ ಎಂದು ಹೇಳಿದರು.
ಪ್ರೇರಣೆ ನೀಡುವ ಇಂತಹ ಚಲನಚಿತ್ರವನ್ನು ಮಕ್ಕಳಿಗೆ ತೋರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಸಂಘಸಂಸ್ಥೆಗಳು ಮುಂದಾಗಬೇಕಿದೆ, ಜಿಲ್ಲೆಯಲ್ಲಿ ಈ ಚಿತ್ರವನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ತೋರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿ ಮಾಡಲಾಗುವುದು ಎಂದರು.
ಪ್ರೇಕ್ಷಕ ಗಣ್ಯರಾಗಿ ಕೊರಟಗೆರೆ ಬಿಇಒ ಸುಧಾಕರ್, ಕಸಾಪ ಜಿಲ್ಲಾಧ್ಯಕ್ಷ ಸಿದ್ಧಲಿಂಗಪ್ಪ, ಜಿಲ್ಲಾ ಲೇಖಕಿ ಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಡಾ.ಅರುಂಧತಿ, ಶೈಲಾ ನಾಗರಾಜ್, ಸೇರಿದಂತೆ ಸಾವಿತ್ರಿ ಬಾಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣಕುಮಾರಿ, ಎಲ್ಲ ತಾಲ್ಲೂಕುಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಭಾಗವಹಿಸಿದ್ದರು.