ಸಾವಳಗಿಯಲ್ಲಿ ಮಕರ ಸಂಕ್ರಮಣ ಜಾತ್ರಾ ಮಹೋತ್ಸವ

ಕಲಬುರಗಿ:ಜ.14: ತಾಲ್ಲೂಕಿನ ಸಾವಳಗಿ(ಬಿ) ಗ್ರಾಮದಲ್ಲಿ ಜನವರಿ 15 ಮತ್ತು 16ರಂದು ಮಕರ ಸಂಕ್ರಮಣ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮದ ಶ್ರೀ ಶಿವಲಿಂಗೇಶ್ವರ್ ದೇವಸ್ಥಾನದ ಸದ್ಭಕ್ತ ಮಂಡಳಿಯ ರಮೇಶ್ ಆರ್.ಕೆ., ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಶಿವಲಿಂಗೇಶ್ವರ್ ದೇವಸ್ಥಾನದ ಪೀಠಾಧಿಪತಿ ಗುರುನಾಥ್ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಜನವರಿ 15ರಂದು ಸಂಜೆ ಗ್ರಾಮದ ಶ್ರೀ ಶಿವಲಿಂಗೇಶ್ವರ್ ಮಠದಿಂದ ಪಾಲಕಿ ಮೆರವಣಿಗೆಯೊಂದಿಗೆ ಶ್ರೀ ಬಸವೇಶ್ವರರ ದೇವಸ್ಥಾನಕ್ಕೆ ತಲುಪಲಿದೆ. ಸಂಗ್ರಮಣ ಹಬ್ಬವು ಸಹಬಾಳ್ವೆಯ ಸಂಕೇತವಾಗಿದೆ. ಸಡಗರದ ಸಮಯ, ಊರು, ಜಾತ್ರೆಗಳ ಆರಂಭದ ಸುಗ್ಗಿಯ ಕಾಲವಿದು. ವರ್ಷವಿಡಿ ದುಡಿದು ದಣಿದ ರೈತನಿಗೆ ಅವನು ಬೆಳೆದ ಬೆಳೆ ಕೈಗೆ ಬರುವ ಪರ್ವ ಕಾಲ. ತಮ್ಮದೇ ಸಂಪ್ರದಾಯಕ, ಸೊಗಡಿನ ಆಚರಣೆಯ ಹಬ್ಬವಾಗಿದೆ. ಆ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವ ಅದ್ದೂರಿಯಿಂದ ಆಚರಿಸಲಾಗುವುದು ಎಂದು ಅವರು ಹೇಳಿದರು.
ರೈತರು ಬೆಳೆದ ಜೋಳದ ಸೀತನಿ ಬಡೆಯುವ ಕಾರ್ಯಕ್ರಮ, ರಾತ್ರಿ ಹತ್ತು ಗಂಟೆಗೆ ಜಾನಪದ ಗೀತೀ ಪದಗಳು, ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜನವರಿ 16ರಂದು ಬೆಳಗಿನ ಜಾವ ಮೂರು ಗಂಟೆಯಿಂದ ಗ್ರಾಮದ ರಾಜಬೀದಿಯ ಮುಖಾಂತರ ಶ್ರೀ ಶಿವಲಿಂಗೇಶ್ವರರ ಪಲ್ಲಕ್ಕಿ ಮತ್ತು ಮಠದ ಪೀಠಾಧಿಪತಿಗಳ ಭವ್ಯ ಮೆರವಣಿಗೆ ಜರುಗಲಿದೆ. ಬೆಳಿಗ್ಗೆ 11 ಗಂಟೆಗೆ ಮೆರವಣಿಗೆ ತಲುಪಿ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ್ ಸಾವಳಗಿ, ಉಸ್ಮಾನ್ ಲದಾಫ್ ಗನಿ, ಯಲ್ಲಾಲಿಂಗ್ ಘರ್, ಮಲಿಕ್ ಮಿಂಚನ್, ಚಂದ್ರಕಾಂತ್ ಸಿಂಗೆ, ಯಮನಯ್ಯ ಗುತ್ತೇದಾರ್, ಶಿವಲಿಂಗಪ್ಪ ಮಾಲಿಪಟೀಲ್, ಶಾಂತಕುಮಾರ್ ಮುಂತಾದವರು ಉಪಸ್ಥಿತರಿದ್ದರು.