ಸಾವಯವ ಸುಸ್ಥಿರ ಕೃಷಿಕನ ಹಿರಿಮೆ ಗರಿಮೆ

ಕಲಬುರಗಿ:ಎ.20: ಜಿಲ್ಲೆಯ ಅಫಜಲಪುರ ತಾಲೂಕಿನ ಹಸರಗುಂಡಗಿಯ ಎಂ.ಎಸ್.ಡಬ್ಲ್ಯೂ. ಓದಿದ ಹನುಮಂತಪ್ಪ ಮಲ್ಲೇಶಪ್ಪ ಬೆಳಗುಂಪಿ(58) 15 ಎಕರೆ ಖುಷ್ಕಿ ಮತ್ತು 7 ಎಕರೆ ನೀರಾವರಿ ಭೂಮಿಯಲ್ಲಿ ಸಾವಯವ ಸುಸ್ಥಿರ ಕೃಷಿ ಪದ್ಧತಿಯಿಂದ ತೋಟಗಾರಿಕೆ ಮತ್ತು ಆಹಾರಧಾನ್ಯ ಬೆಳೆಗಳನ್ನು ಕಳೆದ 15 ವರ್ಷಗಳಿಂದ ಬೆಳೆದು ವರ್ಷಕ್ಕೆ 14 ಲಕ್ಷ ರೂ.ಗಿಂತ ಅಧಿಕ ಲಾಭ ಗಳಿಸುತ್ತಿದ್ದಾರೆ. ಜೇನುಕೃಷಿ, ಕುರಿ ಸಾಕಾಣಿಕೆ, ಎರೆಹುಳು ಗೊಬ್ಬರ, ಜೀವಾಮೃತ, ಜೈವಿಕ ಕೀಟನಾಶಕ, ಸಾವಯವ ತೊಗರಿಬೇಳೆ ತಯಾರಿಕೆ ಮತ್ತು ರೈತರಿಗಾಗಿ ಕೃಷಿ ಪಾಠಶಾಲೆ ನಡೆಸುತ್ತಿದ್ದು, ರೈತರಿಗೆ ಮಾದರಿಯಾಗಿದ್ದಾರೆ.

ಚೆನ್ನೈನಲ್ಲಿ ನೌಕರಿ ಮಾಡುವಾಗ ಕ್ಯಾನ್ಸರ್ ಆಸ್ಪತ್ರೆಯಲ್ಲಿಯೂ ಕೌನ್ಸಿಲರ್ ಆಗಿದ್ದರು. ದುಶ್ಚಟವಿಲ್ಲದವರೂ ಕ್ಯಾನ್ಸರ್ ಚಿಕಿತ್ಸೆಗೆ ಬರುವುದನ್ನು ಕಂಡು ಚಕಿತರಾಗಿ ಆಳಧ್ಯಯನ ನಡೆಸಿದರು. ಇದಕ್ಕೆ ವಿಷಾಹಾರ ಸೇವನೆಯೇ ಪ್ರಮುಖ ಕಾರಣವೆಂಬುದನ್ನರಿತು ವಿಷಮುಕ್ತ ಆಹಾರೋತ್ಪಾದನೆಯ ದೃಢಸಂಕಲ್ಪ ಮಾಡಿ ನೌಕರಿಯನ್ನೇ ತ್ಯಜಿಸಿದರು. ತಮ್ಮ ಭೂಮಿಯಲ್ಲಿ ಸಾವಯವ ಕೃಷಿಯ ಹತ್ತಾರು ಪ್ರಯೋಗಗಳನ್ನು ನಡೆಸಿ ಸಾವಯವ ಸಂತ ಎಂದೇ ಬಿಂಬಿತರಾಗಿದ್ದಾರೆ. ಪತ್ನಿ ಜಗದೇವಿ ಕೃಷಿಕಾರ್ಯ ಚಟುವಟಿಕೆಗಳಿಗೆ ಕೈಜೋಡಿಸುವರು.

ಹನುಮಂತಪ್ಪ 2.22 ಎಕರೆಯಲ್ಲಿ 100 ಮಾವು, 100 ಸಪೋಟ, 500 ಪೇರಲ, 50 ಸೀತಾಫಲ, 100 ತೆಂಗು, 100 ಲಿಂಬೆ ಗಿಡಗಳನ್ನು ಹಾಗೂ ಹೊಲದ ಬದುಗಳಲ್ಲಿ 200 ಸಾಗುವಾನಿ ಮರಗಳನ್ನು ಬೆಳೆದಿದ್ದಾರೆ. ತೋಟಗಾರಿಕೆ ಬೆಳೆಗಳಿಗಾಗಿ ಆಳದ ಗುಂಡಿಗಳನ್ನು ತೋಡಿ ಜೀವಾಮೃತ, ಪಂಚಗವ್ಯ, ಗೋಪಜಲ, ವೇಸ್ಟ್ ಡಿಕಂಪೋಜರ್, ಎರೆಹುಳು ಗೊಬ್ಬರಗಳಿಂದ ಭೂಮಿ ಫಲವತ್ತತೆ ಹೆಚ್ಚಿಸಿದರು. ಸಸಿಗಳನ್ನು ಗಿಡದಿಂದ ಗಿಡಕ್ಕೆ ಮತ್ತು ಸಾಲಿನಿಂದ ಸಾಲಿಗೆ 20×20 ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ. ಉಳಿದ ಭೂಮಿಯಲ್ಲಿ ಕಬ್ಬು ಮತ್ತಿತರ ಆಹಾರಧಾನ್ಯ ಬೆಳೆಗಳನ್ನು ಬೆಳೆಯುತ್ತಿದಾರೆ.

ಕೃಷಿಹೊಂಡಕ್ಕೆ ಮತ್ತು ಹನಿ ನೀರಾವರಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ಸಹಾಯಧನ ಪಡೆದಿದ್ದು, ಹನಿ ನೀರಾವರಿಯಿಂದ ಬೆಳೆಗಳಿಗೆ ವಾರಕ್ಕೊಮ್ಮೆ ನೀರುಣಿಸುವರು. ಅಗ್ನಿಅಸ್ತ್ರ, ಬ್ರಹ್ಮಾಸ್ತ್ರ, ನೇಮಾಸ್ತ್ರ, ದಶಪರಣಿ, ಮೀನೆಣ್ಣೆ, ಬೇವಿನೆಣ್ಣೆ ಜೈವಿಕ ಕೀಟನಾಶಕಗಳಿಂದ ಕಡಿಮೆ ಖರ್ಚಿನಲ್ಲಿ ಬೆಳೆ ಸಂರಕ್ಷಿಸಿಕೊಳ್ಳುತ್ತಿದ್ದಾರೆ.

ಪ್ರತಿವರ್ಷ 40 ಕ್ವಿಂಟಲ್ ಮಾವು, 20 ಕ್ವಿಂಟಲ್ ಸಪೋಟ, 40 ಕ್ವಿಂಟಲ್ ಪೇರಲು ಉತ್ಪಾದಿಸುತ್ತಿದ್ದಾರೆ. ತಾವು ಉತ್ಪಾದಿಸಿದ ಎಲ್ಲ ಹಣ್ಣು ಮತ್ತು ಆಹಾರಧಾನ್ಯಗಳೆಲ್ಲವನ್ನೂ ಸ್ವತಃ ತಾವೇ ಕಲಬುರಗಿಯ ಐವಾನ್‍ಶಾಹಿ ಪ್ರದೇಶದಲ್ಲಿ ಮಾರುತ್ತಿದ್ದಾರೆ. ಎಲ್ಲ ಬೆಳೆಗಳ ವಾರ್ಷಿಕ ನಿರ್ವಹಣೆಗಾಗಿ 3 ಲಕ್ಷ ರೂ. ಖರ್ಚಾದರೂ, ಒಟ್ಟು 14 ಲಕ್ಷ ರೂ. ನಿವ್ವಳ ಆದಾಯ ಗಳಿಸುತ್ತಿದ್ದಾರೆ.

ಐದು ಜಾನುವಾರು, 17 ಕುರಿ ಸಾಕಣೆಯಿಂದ ಜೀವಾಮೃತ ತಯಾರಿಸುವರು. ಎರೆಹುಳು ಗೊಬ್ಬರದ ಎಂಟು ಘಟಕಗಳಿಂದ ವರ್ಷಕ್ಕೆ 10 ಟನ್ ಎರೆಹುಳು ಗೊಬ್ಬರ ಉತ್ಪಾದಿಸಿ ಹೊಲದಲ್ಲೇ ಬಳಸುತ್ತಿದ್ದಾರಲ್ಲದೆ ರೈತರಿಗೂ ಮಾರುತ್ತಿದ್ದಾರೆ. ಜೇನುಕೃಷಿಯಿಂದ ವರ್ಷಕ್ಕೆ 100 ಕೆ.ಜಿ. ಜೇನು ಉತ್ಪಾದಿಸುವರು. ತೊಗರಿಬೇಳೆ ತಯಾರಿಕಾ ಕಿರುಘಟಕದಿಂದ ತೊಗರಿಬೇಳೆ ಉತ್ಪಾದಿಸಿ “ಬೆಳಗುಂಪಿ” ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ.

ಕಳೆದೊಂದು ವರ್ಷದಿಂದ ರಾಜ್ಯದ ವಿವಿಧ ಜಿಲ್ಲೆಗಳ 600 ರೈತರಿಗೆ, ಕೃಷಿ ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯಲ್ಲಿ ಉತ್ಪಾದನೆಯಿಂದ ಮಾರುಕಟ್ಟೆಯವರೆಗೆ ಯೋಜನೆ ರೂಪಿಸಿಕೊಳ್ಳುವ ಮತ್ತು ಕಡಿಮೆ ವೆಚ್ಚದಿಂದ ಅಧಿಕ ಇಳುವರಿ ಪಡೆಯುವ, ಗೊಬ್ಬರ ಕೀಟನಾಶಕಗಳ ಬಳಕೆ, ಕೊಯ್ಲು ವಿಧಾನದ ಬಗ್ಗೆ ಒಂದು ದಿನದ ಕೃಷಿ ತರಬೇತಿ ನೀಡಿದ್ದಾರೆ. ಮುಂದೆ ಮೂರು ದಿನದ ತರಬೇತಿ ನೀಡಲಿದ್ದಾರೆ.

ರಾಜ್ಯ ಸರ್ಕಾರದ ಕೃಷಿ ಪಂಡಿತ, ಬ್ಯಾಂಕ್ ಆಫ್ ಬರೋಡಾದ ಶ್ರೇಷ್ಠ ಕೃಷಿಕ, ವಿಜಯ ಕರ್ನಾಟಕ ಪತ್ರಿಕೆಯ ಸೂಪರ್ ಸ್ಟಾರ್ ರೈತ, ಏಸಿಯಾ ನೆಟ್ ಸುವರ್ಣ ಟಿವಿಯ ರೈತ ರತ್ನ ಪ್ರಶಸ್ತಿಗಳಲ್ಲದೆ ಅನೇಕ ಸಂಘ ಸಂಸ್ಥೆಗಳಿಂದಲೂ ಹಲವಾರು ಪ್ರಶಸ್ತಿಗಳನ್ನು ಪಡೆದು ಸನ್ಮಾನಿತರಾಗಿದ್ದಾರೆ. ಇವರ ಸಂಪರ್ಕ ಸಂಖ್ಯೆ 9449125035.

ಜಿ.ಚಂದ್ರಕಾಂತ, ನಿವೃತ್ತ ಉಪನಿರ್ದೇಶಕರು,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,ಕಲಬುರಗಿ