ಸಾವಯವ ಸಿರಿಧಾನ್ಯ ಮೇಳ

ಕೋಲಾರ,ಜ,೯-ಜಿಲ್ಲೆಯಲ್ಲಿ ಸಾವಯವ ಸಿರಿಧಾನ್ಯ ಮೇಳ ಹಾಗೂ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನವನ್ನು ಜನವರಿ ೧೩ ರಿಂದ ೧೫ ರ ವರೆಗೆ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ವೆಂಕಟ್ ರಾಜಾರವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜನರು ಅಸಹಜ ಜೀವನಶೈಲಿ ಅಳವಡಿಸಿಕೊಂಡಿದ್ದು, ಅಸಮತೊಲನ ಪೌಷ್ಠಿಕಾಂಶ ಮತ್ತು ಅಲ್ಪ ನಾರಿನ ಆಹಾರ ಪದಾರ್ಥಗಳನ್ನು ಸೇವಿಸುತ್ತಿರುವುದರಿಂದ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ನಮ್ಮ ಪಾರಂಪರಿಕ ಬೆಳೆಗಳಾದ ಸಿರಿಧಾನ್ಯಗಳನ್ನು ಕಡಿಮೆ ಫಲವತ್ತತೆ ಹಾಗೂ ಕಡಿಮೆ ಮಳೆಯಲ್ಲಿಯೂ ಸಹ ಬೆಳೆಯಬಹುದಾಗಿದೆ. ಸಿರಿಧಾನ್ಯಗಳು ಪೌಷ್ಠಿಕಾಂಶಗಳ ಆಗರಗಳಾಗಿವೆ. ಇವುಗಳಲ್ಲಿ ಯಥೇಚ್ಚವಾಗಿ ನಾರಿನಾಂಶ ಹಾಗೂ ವಿವಿಧ ಪೋಷಕಾಂಶ ಮತ್ತು ಖನಿಜಾಂಶಗಳು ಇರುತ್ತವೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ರೈತರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಈ ಮೇಳವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುತ್ತದೆ. ಈ ಕಾರ್ಯಕ್ರಮವನ್ನು ಮಾನ್ಯ ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನರವರು ಜ ೧೩ ರಂದು ಸಂಜೆ ೪ ಗಂಟೆಗೆ ಉದ್ಘಾಟಿಸಲಿದ್ದಾರೆ. ಮಾನ್ಯ ಲೋಕಸಭಾ ಸದಸ್ಯ ಎಸ್ ಮುನಿಸ್ವಾಮಿ ರವರು ಜಿಲ್ಲೆಯ ಪ್ರಗತಿಪರ ರೈತರಿಗೆ ರೈತ ಪ್ರಶಸ್ತಿಯನ್ನು ಪ್ರಧಾನ ಮಾಡಲಿರುವರು ಎಂದರು.
ಕೃಷಿಯಲ್ಲಿ ಆವಿಷರಗೊಂಡ ವಿನೂತನ ತಾಂತ್ರಿಕತೆಗಳ ಪ್ರಾತ್ಯಾಕ್ಷತೆಗಳನ್ನು ಮೇಳದಲ್ಲಿ ತೋರಿಸಲಾಗುವುದು. ಇದರಿಂದಾಗಿ ಸಾಕಷ್ಟು ಮಾಹಿತಿಗಳು ರೈತರಿಗೆ ದೊರೆಯಲಿದೆ. ಹಾಗಾಗಿ ಜಿಲ್ಲೆಯ ಎಲ್ಲಾ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಿ ಕೃಷಿಸಂಬಂಧಿತ ಹಾಗೂ ತೋಟಗಾರಿಕೆ ಸಂಬಂಧಿತ ನವೀನ ಪದ್ದತಿಗಳು ಮತ್ತು ಆವಿಷ್ಕಾರಗಳ ಬಗ್ಗೆ ತಿಳಿದುಕೊಂಡು ಮೇಳದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನುಡಿದರು.
ಸಾವಯವ ಸಿರಿಧಾನ್ಯ ಮೇಳದ ಅಂಗವಾಗಿ ಸಾಪ್ರದಾಯಿಕ ಆರೋಗ್ಯಕರ ಆಹಾರಗಳ ಪುನರನ್ವೇಷಣೆಗಾಗಿ ಸಿರಿಧಾನ್ಯ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳಿಗ್ಗೆ ೬:೦೦ಕ್ಕೆ ನಗರದ ಪೋಲೀಸ್ ಮೈದಾನದಿಂದ ಜಿಲ್ಲಾ ಪ್ರವಾಸಿ ಮಂದಿರದವರೆಗೆ ಕಾಲ್ನಡಿಗೆ ಅರಿವು ಜಾಥಾ ಕಾಯಕ್ರಮವು ನಡೆಯಲಿದೆ ಎಂದು ಕೃಷಿ ಜಂಟಿ ನಿರ್ದೇಶಕಿ ರೂಪದೇವಿ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಾವಯವ ಮತ್ತು ಸಿರಿಧಾನ್ಯ ಮೇಳ ಹಾಗೂ ಜಿಲ್ಲಾ ಮಟ್ಟದ ಫಲಪುಷ್ಪ ೨೦೨೩ರ ಪ್ರಚಾರ ಸಾಮಗ್ರಿಗಳಾದ ಪೋಸ್ಟರ್‌ಗಳು ಹಾಗೂ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕುಮಾರ ಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.