ಸಾವಯವ ಕೃಷಿ ಪರಿಕರಗಳ ಉತ್ಪಾದನೆಗೆ ಉತ್ತೇಜನ: ವಿಜುಗೌಡ ಪಾಟೀಲ

ವಿಜಯಪುರ, ಏ15-ರೈತರು ಸಾವಯವ ಕೃಷಿ ಮಾಡಲು ವಿಪುಲ ಅವಕಾಶಗಳಿದ್ದು, ಅದರ ಸದುಪಯೋಗಪಡಿಸಿಕೊಂಡು ಸಾವಯವ ಕೃಷಿಯಲ್ಲಿ ಉತ್ತಮ ಗುಣಮಟ್ಟದ ಆಹಾರ ಉತ್ಪಾದಿಸಿ ದೇಶಕ್ಕೆ ವಿಷಮುಕ್ತ ಆಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಎಸ್. ಪಾಟೀಲ ಹೇಳಿದರು.
ನಗರದ ಔದ್ಯೋಗಿಕ ಕೇಂದ್ರ ಆವರಣದಲ್ಲಿ ನೂತನವಾಗಿ ಸ್ಥಾಪಿಸಿರುವ ಶಿವಯೋಗಿ ಎಕೋ ಅಗ್ರಿ ಸೈಯನ್ಸ ವತಿಯಿಂದ ಆರಂಭಿಸಲಾದ ಸಾವಯವ ಗೊಬ್ಬರ ಮತ್ತು ಜೈವಿಕ ಕೃಷಿ ಪರಿಕರಗಳ ಉತ್ಪಾದನಾ ಘಟಕ ಉದ್ಘಾಟಿಸಿ ಮಾತನಾಡಿದರು.
ದೇಶದೆಲ್ಲೆಡೆ ಈಗ ಅನೇಕ ರೋಗ ರುಜಿನಗಳನ್ನು ಕಾಣುತ್ತಿದ್ದೇವೆ. ಜನರ ರೋಗ ನಿರೋಧಕ ಶಕ್ತಿ ಕುಗ್ಗುತ್ತಿದೆ. ಇದಕ್ಕೆ ಬದಲಾದ ಆಹಾರ ಜೀವನ ಶೈಲಿ ಕಾರಣ. ಹೆಚ್ಚು ರಾಸಾಯನಿಕ, ಕ್ರಿಮಿನಾಶಕ ಬಳಸಿ ಬೆಳೆದ ಆಹಾರಧಾನ್ಯ ಸೇವನೆಯೇ ಇದಕ್ಕೆ ಕಾರಣ. ರೈತರು ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು, ಭೂಮಿಗೆ ಸತ್ವಯುತ, ಸಾವಯವ ಗೊಬ್ಬರ ಹಾಕಬೇಕು. ಜೈವಿಕ ಗೊಬ್ಬರ, ಸಸ್ಯಜನ್ಯ ಕೀಟನಾಶಕ ಬಳಸಿ ಬೆಳೆಯಬೇಕು. ಇದನ್ನು ಉತ್ತೇಜಿಸಲು ಸರಕಾರದಿಂದ ರೈತರಿಗೆ ತರಬೇತಿ ಕೊಡಿಸಿ ಸಾವಯವ ದೃಡಿಕರಣ ಪತ್ರ ಕೊಡಿಸುವ ಪ್ರಾಮಾಣಿಕÀ ಪ್ರಯತ್ನ ಮಾಡುತ್ತೇನೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದರು.
ಮುಖ್ಯ ಅತಿಥಿ ಜಂಟಿ ಕೃಷಿ ನಿರ್ದೇಶಕ ಡಾ. ವಿಲಿಯಂ ರಾಜಶೇಖರ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ರೈತರು ಸಾವಯವ ಕೃಷಿ ಕೈಗೊಳ್ಳುತ್ತಿದ್ದು, ಅದಕ್ಕಾಗಿ ಇಲಾಖೆಯಿಂದ ಹಲವಾರು ಯೋಜನೆಗಳಿವೆ. ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಪದಾರ್ಥಗಳ ಬೆಲೆ ಏರಿಕೆಯಾಗುತ್ತಿದ್ದು ಇದರಿಂದಾಗಿ ಡಿಎಪಿ, ಯೂರಿಯಾ ಗೊಬ್ಬರ ಬೆಲೆ ಹೆಚ್ಚಾಗಿದೆ. ರೈತರು ರಾಸಾಯನಿಕ ಗೊಬ್ಬರ ಬಳಕೆ ಬದಲಾಗಿ ಸಾವಯವ ಗೊಬ್ಬರ ಬಳಕೆ ಹೆಚ್ಚೆಚ್ಚು ಮಾಡಬೇಕೆಂದರು.
ಸಹ ವಿಸ್ತರಣಾ ನಿರ್ದೇಶಕ ಡಾ. ಆರ್. ಬಿ. ಬೆಳ್ಳಿ ಮಾತನಾಡಿ, ರೈತರಿಗೆ ಉತ್ತಮ ಬೀಜ ಹಾಗೂ ಉತ್ಕøಷ್ಟ ಸಾವಯವ ಗೊಬ್ಬರ ಎರಡು ಪ್ರಮುಖ ಪರಿಕರಗಳು ಬೇಕಾಗುತ್ತವೆ. ಇವೆರಡೂ ಇದ್ದರೆ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ ಹಾಗಾಗಿ ರೈತರು ಯಥೆಚ್ಛವಾಗಿ ಸಾವಯವ ಹಾಗೂ ಜೈವಿಕ ಗೊಬ್ಬರ ಬಳಸಬೇಕೆಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಗುರಲಿಂಗಪ್ಪ ಅಂಗಡಿ, ಮಲ್ಲು ಕಲಾದಗಿ ಮಾತನಾಡಿದರು, ಮಲ್ಲಿಕಾರ್ಜುನ ಜೋಗುರ ಸಾಹಿತಿ ಎಮ್. ಎನ್. ವಾಲಿ, ಸುರೇಶ ವಾಲಿ, ಜ್ಯೋತಿ ವಾಲಿ, ಅಶೋಕ, ಪ್ರಸಾದ ವಾಲಿ, ಉದ್ಯಮಿ ರಾಜು ಬಿಜ್ಜರಗಿ, ಚಂದ್ರು ಯಾಳವಾರ ಇತರರು ಉಪಸ್ಥಿತರಿದ್ದರು.