
ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮಾ.06: ಕೃಷಿಯಲ್ಲಿ ರಾಸಾಯನಿಕ ಬಳಕೆಯನ್ನು ಹಂತ ಹಂತವಾಗಿ ಕಡಿಮೆಗೊಳಿಸಿ, ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಬೇಕು ಎಂದು ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ್ಯ ಅಧ್ಯಕ್ಷ ವಿವೇಕರಾವ್ ಮೋರೆ ಕರೆ ನೀಡಿದರು.
ತಾಲೂಕಿನ ಸೋಗಿ ಗ್ರಾಮದಲ್ಲಿ ಭಾರತೀಯ ಕಿಸಾನ್ ಸಂಘ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಪೂರ್ವಜರು ಹಿಂದೆ ಕೃಷಿಯಲ್ಲಿ ಯಾವುದೇ ರಾಸಾಯನಿಕ ಬಳಸದೇ ಬೆಳೆ ಬೆಳೆಯುತ್ತಿದ್ದರು. ಈಗ ಅಧಿಕ ಇಳುವರಿಯ ದುರಾಸೆಯಿಂದ ಯಥೇಚ್ಚವಾಗಿ ರಾಸಾಯನಿಕ ಸುರಿಯುತ್ತಿರುವುದರಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ. ಇದರಿಂದ ಪರಿಸರದ ಮೇಲೂ ಕೆಟ್ಟ ಪರಿಣಾಮ ಬೀರಿದೆ. ರೈತರು ಬಿತ್ತನೆ ಬೀಜ, ಗೊಬ್ಬರ ಬಳಕೆಯಲ್ಲಿ ಸ್ವಾವಲಂಬನೆ ಸಾಧಿಸಬೇಕು. ಗುಣಮಟ್ಟದ ಬೀಜವನ್ನು ಸ್ವತಃ ಉತ್ಪಾದನೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಂ.ಮಹೇಶ್ವರಸ್ವಾಮಿ ಮಾಗಳ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ನೀಲಕಂಠಪ್ಪ, ವೀರಭದ್ರಸ್ವಾಮಿ, ಪ್ರಧಾನ ಕಾರ್ಯದರ್ಶಿವಿ.ಬಿ.ಕೊಟ್ರೇಶ, ದೂಪದಹಳ್ಳಿ ಕೊಟ್ರೇಶ, ಲಕ್ಷ್ಮಣ ಮುದೇನೂರು, ನಿವೃತ್ತ ಶಿಕ್ಷಕ ದುರುಗಪ್ಪ, ಹಾಲಪ್ಪ, ಕೆ.ಎಂ.ಪ್ರಶಾಂತಸ್ವಾಮಿ, ಅಶೋಕ, ಎಂ.ವಿಜಯಕುಮಾರ್ ಇದ್ದರು.