ಸಾವನದುರ್ಗ ಪ್ರವಾಸಿತಾಣ ಅಭಿವೃದ್ಧಿ : ಸಿಂಗ್

ಬೆಂಗಳೂರು, ಸೆ. ೨೩- ಬೆಂಗಳೂರು ಸಮೀಪದ ಮಾಗಡಿ ಬಳಿಯ ಸಾವನದುರ್ಗ ಪ್ರವಾಸಿ ತಾಣದಲ್ಲಿ ರೋಪ್‌ವೇ ಕಾರುಗಳನ್ನು ಅಳವಡಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಪ್ರವಾಸೋಧ್ಯಮ ಮತ್ತು ಹಾಗೂ ಪರಿಸರ ಸಚಿವ ಆನಂದ್‌ಸಿಂಗ್ ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಮಂಜುನಾಥ್ ರವರ ಪ್ರಶ್ನೆಗೆ ಉತ್ತರಿಸಿದ ಅವರು, ಮಾಗಡಿ ತಾಲ್ಲೂಕಿನ ಸಾವನದುರ್ಗವನ್ನು ಪ್ರವಾಸಿ ತಾಣವಾಗಿ ಗುರುತಿಸಲಾಗಿದೆ. ಇಲ್ಲಿ ೧೫ ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದರು.
ಈ ಪ್ರವಾಸಿ ತಾಣಕ್ಕೆ ಬೆಂಗಳೂರಿನಿಂದ ವಾರಾಂತ್ಯದಲ್ಲಿ ಸೈಕಲ್‌ಗಳ ಮೇಲೆ ಹೆಚ್ಚಿನ ಜನ ಬರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹಾಗಾಗಿ ಅಕ್ಟೋಬರ್ ೧೫ ರೊಳಗೆ ಈ ಕ್ಷೇತ್ರಕ್ಕೆ ಭೇಟಿ ನೀಡಿ ಖುದ್ಧು ಪರಿಶೀಲನೆ ನಡೆಸಿ ಜಿಲ್ಲಾಉಸ್ತುವಾರಿ ಸಚಿವರ ಜತೆ ಚರ್ಚಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನವೆಂಬರ್ ೧ ರೊಳಗೆ ಟೆಂಡರ್ ಕರೆದು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಾಗಿ ಅವರು ಹೇಳಿದರು.