ಸಾಲ ಮರುಪಾವತಿ ಸುತ್ತೋಲೆಗೆ ವ್ಯಾಪಕ ಟೀಕೆ

ಕೋಲಾರ,ಮೇ.೨೮:ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆದ ಮಹಿಳೆಯರ ಸಂಕಷ್ಟಕ್ಕೆ ಮುಖ್ಯಮಂತ್ರಿ ಸ್ಪಂದಿಸಿ ಸಾಲದ ಕಂತು ಮರುಪಾವತಿ ಅವಧಿಯನ್ನು ೩ ತಿಂಗಳು ವಿಸ್ತರಿಸಿದ್ದರೂ, ಸಹಕಾರ ಇಲಾಖೆ ಅದಕ್ಕೆ ಸಿಎಂ ಆದೇಶವನ್ನೇ ಧಿಕ್ಕರಿಸಿ ಜೂನ್ ಕೊನೆಗೆ ಪೂರ್ಣ ೩ ಕಂತು ಒಂದೇ ಬಾರಿ ಪಾವತಿಗೆ ಆದೇಶ ಹೊರಡಿಸಿರುವುದು ತಾಯಂದಿರ ತೀವ್ರ ಟೀಕೆಗೆ ಗುರಿಯಾಗಿದೆ.
ಸಾಲ ಮರುಪಾವತಿ ಸಂಬಂಧ ಸಹಕಾರ ಇಲಾಖೆಯ ಆದೇಶದಿಂದ ಆಕ್ರೋಶಗೊಂಡ ವಿವಿಧ ಮಹಿಳಾ ಸಂಘಗಳ ಪ್ರತಿನಿಧಿಗಳು ನಗರದ ಕೇಂದ್ರ ಸಹಕಾರಿ ಬ್ಯಾಂಕಿಗೆ ಧಾವಿಸಿ, ಮಾಧ್ಯಮದೊಂದಿಗೆ ಮಾತನಾಡಿದರು.
ಕೋವಿಡ್ ಲಾಕ್‌ಡೌನ್ ಘೋಷಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಣೆ ಸಂದರ್ಭದಲ್ಲಿ ಸಹಕಾರಿ ಬ್ಯಾಂಕುಗಳಿಂದ ಪಡೆದ ಸಾಲದ ಕಂತು ಪಾವತಿಯನ್ನು ೩ ತಿಂಗಳು ವಿಸ್ತರಿಸಿ ಘೋಷಿಸುವ ಮೂಲಕ ರೈತರು,ಸ್ತ್ರೀಶಕ್ತಿ ಸಂಘಗಳ ಲಕ್ಷಾಂತರ ಮಹಿಳೆಯರ ಪ್ರಶಂಸೆಗೆ ಪಾತ್ರರಾಗಿದ್ದರು.
ಆದರೆ ಮೇ.೨೧ ರಂದು ಸಹಕಾರ ಸಂಘಗಳ ನಿಬಂಧಕರು ಹೊರಡಿಸಿರುವ ಅವೈಜ್ಞಾನಿಕ ಆದೇಶದಲ್ಲಿ ಸಾಲ ಪಾವತಿಗೆ ಮಾತ್ರ ೩ ತಿಂಗಳು ಅವಕಾಶ ನೀಡಿ, ಒಂದೇ ಬಾರಿ ಮೂರು ಕಂತನ್ನು ಪಾವತಿಸುವಂತೆ ತಿಳಿಸಿರುವ ಮೂಲಕ ಮುಖ್ಯಮಂತ್ರಿಗಳ ಘೋಷಣೆಯನ್ನೇ ತಿರುಚಿ ಸುತ್ತೋಲೆ ಕಳುಹಿಸಿ ಸರ್ಕಾರದ ವಿರುದ್ದ ರೈತರು,ಮಹಿಳೆಯರು ತಿರುಗಿ ಬೀಳುವಂತೆ ಮಾಡಿದ್ದಾರೆ ಎಂದರು.
ಕಳೆದ ವರ್ಷದ ಲಾಕ್‌ಡೌನ್ ಸಂದರ್ಭದಲ್ಲಿಯೂ ಕಂತು ಪಾವತಿಯನ್ನು ೩ ತಿಂಗಳು ಮುಂದೂಡಲಾಗಿತ್ತು. ಅದೇ ಮಾದರಿಯಲ್ಲಿ ರೈತರು, ಮಹಿಳಾ ಸಂಘಗಳ ಲಕ್ಷಾಂತರ ತಾಯಂದಿರ ನೋವಿಗೆ ಸ್ಪಂದಿಸಿದ ಯಡಿಯೂರಪ್ಪ ಈ ಬಾರಿಯೂ ಕಂತು ಪಾವತಿಯನ್ನು ೩ ತಿಂಗಳು ವಿಸ್ತರಿಸಿ ಘೋಷಣೆ ಮಾಡಿದ್ದಾರೆ.
ಮಹಿಳಾ ಸ್ವಸಹಾಯ ಸಂಘಗಳಿಗೆ ಸಹಕಾರ ಬ್ಯಾಂಕುಗಳ ಮೂಲಕ ಬಡ್ಡಿರಹಿತ ಸಾಲ ಒದಗಿಸುವ ಮೂಲಕ ಸರ್ಕಾರ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಮೂಲಕ ನೆರವಾಗಿರುವುದು ಶ್ಲಾಘನೀಯ ಎಂದರು.
ಸಹಕಾರ ಬ್ಯಾಂಕುಗಳು ಒದಗಿಸಿರುವ ಬಡ್ಡಿರಹಿತ ಸಾಲ ಸೌಲಭ್ಯದಿಂದ ಅನೇಕ ಕುಟುಂಬಗಳು ಇಂದು ಬದುಕು ಕಟ್ಟಿಕೊಂಡಿವೆ, ಸ್ವಂತ ಉದ್ಯೊಗ ನಡೆಸುವ ಮೂಲ
ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆದಿರುವ ಲಕ್ಷಾಂತರ ಮಹಿಳೆಯರು,ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಸಹಕಾರ ಇಲಾಖೆ ನಿಬಂಧಕರಿಗೆ ಸರ್ಕಾರ ಸ್ವಷ್ಟ ನಿರ್ದೇಶನ ನೀಡುವ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ನಡೆದಿರುವ ಪ್ರಯತ್ನಕ್ಕೆ ಕೊನೆಯಾಡಬೇಕಾಗಿದೆ.
ಇಲ್ಲವಾದಲ್ಲಿ ರಾಜ್ಯದ ಲಕ್ಷಾಂತರ ಮಹಿಳೆಯರು,ರೈತರು ಸರ್ಕಾರದ ವಿರುದ್ದ ಸಿಡಿದೇಳುವ ಸಾಧ್ಯತೆ ಇದ್ದು, ಮುಖ್ಯಮಂತ್ರಿಗಳು ಕೂಡಲೇ ಸಹಕಾರ ಇಲಾಖೆಗೆ ಚುರುಕು ಮುಟ್ಟಿಸಬೇಕು, ಒಮ್ಮೆಲೆ ೩ ಕಂತು ಪಾವತಿಯ ಸುತ್ತೋಲೆ ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.