ಸಾಲ ಮರಳಿ ಕೇಳಿದ್ದಕ್ಕೆ ಕೊಲೆ: ಮೂವರಿಗೆ ಜೀವಾವಧಿ ಶಿಕ್ಷೆ

ಕಲಬುರಗಿ,ಜ.16: ತಂದೆ ಸಾಲ ನೀಡಿದ ಹಣ ಮರಳಿ ಕೇಳಿದ ಮಗನನ್ನು ಕೊಲೆ ಮಾಡಿದ ಆರೋಪ ಸಾಬೀತಾದ್ದರಿಂದ ಮೂವರಿಗೆ ಇಲ್ಲಿನ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ಮತ್ತು ತಲಾ 20 ಸಾವಿರ ದಂಡ ವಿಧಿಸಿದೆ.
ನಗರದ ತಾರಫೈಲ್ ನಿವಾಸಿಗಳಾದ ಸುನೀಲ ಅಲಿಯಾಸ್ ಸೋನು ದೇವದಾಸ ಕಾಂಬಳೆ,ಶಿವಲಿಂಗ ಅಣ್ಣಾರಾಯ ಹುಲಿಮನಿ ,ರಾಜು ಸುರೇಶ ಗುರಸುಣಗಿ ಶಿಕ್ಷೆಗೊಳಗಾದವರು.
ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯ ನಿವಾಸಿ ವಿಶಾಲ್ ಎಂಬಾತನ ತಂದೆಯು, ಸುನೀಲ ಅಲಿಯಾಸ್ ಸೋನು ದೇವದಾಸ ಕಾಂಬಳೆಗೆ ಬಡ್ಡಿಯಂತೆ ಹಣ ನೀಡಿದ್ದನು.ಕೊಟ್ಟಹಣ ವಾಪಸ್ಸು ನೀಡುವಂತೆ ವಿಶಾಲ್, ಸುನೀಲ ಅಲಿಯಾಸ್ ಸೋನು ದೇವದಾಸ ಕಾಂಬಳೆಗೆ ಆಗಾಗ ಕೇಳಿದ್ದಾನೆ.ಗೆಳೆಯರ ಮುಂದೆ ಹಣ ಕೇಳಿದ್ದಕ್ಕೆ ಕುಪಿತನಾದ ಆತ ವಿಶಾಲನನ್ನು ಕೊಲೆ ಮಾಡಲು ನಿರ್ಧರಿಸುತ್ತಾನೆ.
2020 ರ ಜೂನ್ 26 ರಂದು ನಾಗನಹಳ್ಳಿ ಸೀಮೆಯ ನಾಲಾ ಪಕ್ಕ ಮೂವರು ಸೇರಿ ವಿಶಾಲನನ್ನು ಕೊಲೆ ಮಾಡುತ್ತಾರೆ.ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗುತ್ತದೆ.
ಪ್ರಕರಣದ ವಿಚಾರಣೆ ನಡೆಸಿದ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮೋಹನ ಬಾಡಗಂಡಿ ಅವರು, ಸಾಕ್ಷಾಧಾರಗಳನ್ನು ಪರಾಮರ್ಶಿಸಿ ತೀರ್ಪು ನೀಡಿ ಆದೇಶಿಸಿದ್ದಾರೆ.1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕ ಎಸ್ ಆರ್ ನರಸಿಂಹಲು ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು.