ಸಾಲ ಮನ್ನಾ ಮಾಡದಿದ್ದಲ್ಲಿ ಉಗ್ರ ಹೋರಾಟ -ಗೌರಮ್ಮ

ಕೋಲಾರ, ಜೂ,೨೦-ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟಿರುವ ಮಾತಿನಂತೆ ಸ್ತ್ರೀಶಕ್ತಿಗಳ ಸಂಘಗಳ ಸಾಲ ಮನ್ನಾ ಮಾಡದಿದ್ದಲ್ಲಿ ಸ್ತ್ರೀ ಶಕ್ತಿ ಸಂಘಟನೆಗಳಿಂದ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಜನವಾದಿ ಮಹಿಳಾ ಸಂಘದ ಉಪಾಧ್ಯಕ್ಷೆ ಗೌರಮ್ಮ ಎಚ್ಚರಿಸಿದರು.
ನಗರದ ರಂಗ ಮಂದಿರದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಜಿಲ್ಲಾ ಸಂಘಟನೆಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲ ಸಂಪೂರ್ಣವಾಗಿ ಮನ್ನಾ ಮಾಡಲು ಹಾಗೂ ಸ್ತ್ರೀಶಕ್ತಿ ಸಂಘಗಳ ಬಡ್ಡಿ ರಹಿತ ಸಾಲದ ಪ್ರಮಾಣ ಒಂದು ಲಕ್ಷಕ್ಕೆ ಹೆಚ್ಚಳ ಮಾಡಲು ಆಗ್ರಹಿಸಿ ಅವರು ಮಾತನಾಡಿದರು
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ವೇಮಗಲ್‌ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಮಹಿಳಾ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಸ್ವಯಂ ಪ್ರೇರಣೆಯಾಗಿ ನೀಡಿರುವ ಆಶ್ವಾಸನೆಯಾಗಿದೆ ಹೊರತು ಇದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ನೀಡಿರುವ ಗ್ಯಾರಂಟಿ ಯೋಜನೆಯಲ್ಲ ಎಂದರು.
ಸ್ಥಳೀಯ ಜನಪ್ರತಿನಿಧಿಗಳು ಸಿಎಂ ಸಿದ್ದರಾಮಯ್ಯರೊಂದಿಗೆ ಮಹಿಳಾ ಸಂಘಟನೆಗಳ ನಿಯೋಗವು ಭೇಟಿ ಮಾಡಿ ಮಾತುಕತೆ ನಡೆಸಲು ಅವಕಾಶ ಕಲ್ಪಿಸಬೇಕು, ಸ್ವಸಹಾಯ ಮಹಿಳಾ ಸಂಘಗಳಿಗೆ ಬಡ್ಡಿ ರಹಿತವಾಗಿ ಒಂದು ಲಕ್ಷಕ್ಕೆ ಸಾಲ ಸೌಲಭ್ಯ ಹೆಚ್ಚಳ ಮಾಡಬೇಕೆಂದರು.
ಕೇಂದ್ರ ಸರ್ಕಾರಕ್ಕೆ ೨೦೨೦ರಲ್ಲಿಯೇ ಸಾಲ ಮನ್ನಾ ಮಾಡಲು ಮನವಿ ಮಾಡಿದ್ದೇವು, ಕೇಂದ್ರ ಶೇ.೭೫ ರಷ್ಟು, ರಾಜ್ಯ ಶೇ.೨೫ರಷ್ಟು ಬ್ಯಾಂಕ್‌ಗಳಿಗೆ ಪಾವತಿಸಿ ಮಹಿಳೆಯರನ್ನು ಸಾಲದಿಂದ ಮುಕ್ತಗೊಳಿಸಬೇಕೆಂದು ಮನವಿ ಮಾಡಿದ್ದೇವು, ಆದರೆ ಸರ್ಕಾರಗಳು ಸ್ಪಂದಿಸಲಿಲ್ಲ. ಭಾರತದ ಬ್ಯಾಂಕ್‌ಗಳಲ್ಲಿ ಲಕ್ಷಾಂತರ ಕೋಟಿ ಸಾಲ ಪಡೆದು ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಕಾರ್ಪೋರೇಟರ್ ಕಂಪನಿಗಳ ಪೈಕಿ ಒಂದು ಕಂಪನಿ ಮಾಡಿರುವ ಸಾಲದಷ್ಟು ೫ ಯೋಜನೆಗಳ ಮೊತ್ತವಾಗದು ಎಂದರು.
ಚುನಾವಣಾ ಸಂದರ್ಭದಲ್ಲಿ ಸ್ವಸಹಾಯ ಮಹಿಳಾ ಸಂಘಗಳನ್ನು ಸಿದ್ದರಾಮಯ್ಯ ಓಟ್ ಬ್ಯಾಂಕ್ ಆಗಿ ಮಾಡಿ ಕೊಂಡರು. ಕೇರಳ ರಾಜ್ಯದ ಮಾದರಿಯಲ್ಲಿ ಕುಟುಂಬಶ್ರೀ ಯೋಜನೆ ರಾಜ್ಯದಲ್ಲಿ ಸಂಜೀವಿನಿಯಾಗಿ ಜಾರಿಗೆ ತಂದರು, ಚುನಾವಣೆಗಳ ನಂತರ ಮಹಿಳಾ ಸಂಘಟನೆಗಳ ನೆನಪು ಬರುವುದಿಲ್ಲವೇ ಎಂದು ಪ್ರಶ್ನಿಸಿದರು.
ಕೃಷಿ ಕ್ಷೇತ್ರ ನಷ್ಟದಲ್ಲಿರುವುದರಿಂದ ಉದ್ಯೋಗ ಸಿಗುತ್ತಿಲ್ಲ ಕೇಂದ್ರ ಪರ್ಯಾಯ ಯೋಜನೆ ರೂಪಿಸದೆ ಕತ್ತರಿ ಹಾಕುತ್ತಿರುವುದರಿಂದ ಮಹಿಳಾ ಸಂಘಗಳ ಸದಸ್ಯರ ಜೀವನ ಸುಧಾರಣೆ ಆಗುತ್ತಿಲ್ಲ ಹಾಗಾಗಿ ಸಾಲ ಮನ್ನಾ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಮಹಿಳೆಯರಯ ಸ್ವಾವಲಂಭಿಗಳಾಗಿ ಸಮಾಜದ ಮುಖ್ಯ ವಾಹಿನಿಗೆ ಬರಲು ವಿಶೇಷವಾದ ಯೋಜನೆಗಳನ್ನು ರೂಪಿಸಬೇಕೆಂದು ಎಂದು ಹೇಳಿದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯದ ನಾಯಕಿ ವಿ.ಗೀತಾ ಮಾತನಾಡಿ, ಮಹಿಳಾ ಸಂಘಗಳು ಈವರೆಗೆ ಯಾವುದೇ ಸಾಲ ಪಡೆದು ಬ್ಯಾಂಕ್‌ಗೆ ಮುಳಗಿಸಿಲ್ಲ, ಬ್ಯಾಂಕ್‌ಗಳನ್ನು ಮುಳುಗಿಸಿದವರು ಎಲ್ಲರೂ ಬಂಡವಾಳಶಾಹಿ ಕೋಟ್ಯಾಧಿಪತಿಗಳೆ ಹೊರತು ಬಡವರ ಮಹಿಳಾ ಸಂಘಗಳಲ್ಲ ಎಂದರು.
ಕೇಂದ್ರದಲ್ಲಿ ಮೋದಿ ನೋಟೋ ಅಮಾನ್ಯನೀಕರಣ ಮಾಡಿದರು. ಬಂಡವಾಳಶಾಹಿಗಳಾದ ನೀರವ್ ಮೋದಿ, ವಿಜಯಮಲ್ಯ, ಮುಕೇಶ್ ಅಂಬಾನಿ ಮುಂತಾದವರಿಗೆ ಲಕ್ಷಾಂತರ ಕೋಟಿ ರೂ. ಸಾಲಮನ್ನಾ ಮಾಡುವ ಮೂಲಕ ಅನುವು ಮಾಡಿಕೊಟ್ಟು ಬಡವರನ್ನು ಯಾಮಾರಿಸಿದರು, ಆದರೆ ಕೃಷಿಯಲ್ಲಿ ನಷ್ಟವಾದ ಬಡ ರೈತರಿಗೆ, ನಿರುದ್ಯೋಗಿಗಳಾಗಿರುವ ಮಹಿಳಾ ಸಂಘಟನೆಗಳ ಸಾಲ ಮನ್ನಾ ಮಾಡಬೇಕೆಂಬ ಕನಿಷ್ಠ ಮಾನವೀಯತೆಯೂ ಇಲ್ಲವಾಗಿದೆ ಎಂದು ಕಿಡಿ ಕಾರಿದರು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಭಾಗ್ಯಮ್ಮ, ಜಿಲ್ಲಾ ಕಾರ್ಯದರ್ಶಿ ಅಂಜನಮ್ಮ, ಜಿಲ್ಲಾ ಖಜಾಂಜಿ ರೇಣುಕಾ, ತಾಲ್ಲೂಕು ಅಧ್ಯಕ್ಷೆ ಸುನಂದಮ್ಮ, ಮಂಜುಳ, ಜಯಶೀಲ ಭಾಗವಹಿಸಿದ್ದರು.