ಸಾಲ ಬಾಧೆ: ವ್ಯಕ್ತಿ ಆತ್ಮಹತ್ಯೆ

ಮಧುಗಿರಿ, ಏ. ೫- ಸಾಲ ಭಾದೆ ತಾಳಲಾರದೆ ವ್ಯಕ್ತಿಯೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ಬೇಡತ್ತೂರು ಗ್ರಾಮದಲ್ಲಿ ನಡೆದಿದೆ .
ತಾಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ಗ್ರಾಮದ ಮಲೇರಂಗಪ್ಪನ ಪುತ್ರ ಮುದ್ದುಕೃಷ್ಣಯ್ಯ (೫೯ ) ಎಂಬ ವ್ಯಕ್ತಿಯೇ ನೇಣಿಗೆ ಶರಣಾಗಿರುವ ದುರ್ದೈವಿ. ಆತ್ಮಹತ್ಯೆಗೆ ಸಾಲದ ಹೊರೆಯೇ ಕಾರಣ ಎನ್ನಲಾಗಿದೆ.
ಮೃತ ವ್ಯಕ್ತಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಪತ್ನಿ, ಮೂವರು ಹೆಣ್ಣುಮಕ್ಕಳಿದ್ದು, ಈ ಪೈಕಿ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದಾರೆ. ಹಲವು ತಿಂಗಳ ಹಿಂದೆ ಎರಡನೇ ಮಗಳ ಮದುವೆಗಾಗಿ ಕೈ ಸಾಲ ಮಾಡಿಕೊಂಡಿದ್ದರು. ಈ ಸಾಲ ತೀರಿಸಲಾಗದೆ ಹೈರಾಣಾಗಿದ್ದರು ಎನ್ನಲಾಗಿದೆ.
ಹಬ್ಬಕ್ಕೆ ನೇರಳೆಕೆರೆಗೆ ಬಂದಿದ್ದು, ಕುಟುಂಬವನ್ನು ತೊರೆದು ಸ್ವಗ್ರಾಮ ಬೇಡತ್ತೂರಿಗೆ ಹೋಗಿ ಮೃತ ತಂದೆ-ತಾಯಿಯ ಸಮಾಧಿಗೆ ಪೂಜೆ ಸಲ್ಲಿಸಿ ಹತ್ತಿರದ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಮಿಡಿಗೇಶಿ ಪಿಎಸ್‌ಐ ಹನುಮಂತರಾಯಪ್ಪ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.