ಸಾಲ ಪಾವತಿ ಅವಧಿ ೬ ತಿಂಗಳು ವಿಸ್ತರಣೆಗೆ ಸುಪ್ರೀಂ ನಿರಾಕರಣೆ

ನವದೆಹಲಿ,ಮಾ.೨೩- ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ೬ ತಿಂಗಳ ಸಾಲ ಪಾವತಿ ಸಮಯ ವಿನಾಯಿತಿಯನ್ನು ವಿಸ್ತರಿಸಬೇಕೆಂಬ ವಿವಿಧ ವ್ಯಾಪಾರ ಸಂಘಟನೆಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ತಳ್ಳಿಹಾಕಿದೆ.

ಸಾಲ ಪಾವತಿ ವಿನಾಯಿತಿ ಅವಧಿ ಹಾಗೂ ಬಡ್ಡಿ ಮನ್ನಾ ಕುರಿತಂತೆ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಎಂ.ಆರ್. ಷಾ ಮತ್ತು ಸಂಜೀವ್ ಖನ್ನಾ ಅವರ ನ್ಯಾಯಪೀಠ ತೀರ್ಪು ಪ್ರಕಟಿಸಿದೆ.

ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ ಕಳೆದ ವರ್ಷದ ಡಿಸೆಂಬರ್ ೧೭ರಂದು ಈ ಮನವಿಗಳ ಬಗ್ಗೆ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಯಾವುದೇ ನಿರ್ದಿಷ್ಟ ಹಣಕಾಸು ಪ್ಯಾಕೇಜ್ ಅಥವಾ ಪರಿಹಾರವನ್ನು ಪ್ರಕಟಿಸುವಂತೆ ಸರ್ಕಾರ ಅಥವಾ ಆರ್‌ಬಿಐಗೆ ಯಾವುದೇ ನಿರ್ದೇಶನ ನೀಡಲಾಗದು ಎಂದಿರುವ ಸುಪ್ರೀಂಕೋರ್ಟ್, ಕೆಲವೊಂದು ವರ್ಗಗಳಿಗೆ ಪರಿಹಾರ ನೀಡುವಂತೆ ಸೂಚಿಸಲಾಗದು ಎಂದು ಹೇಳಿದೆ.

ಯಾವುದೇ ಸಾಲಗಾರನಿಂದ ಸಾಲ ಮರುಪಾವತಿ ಅವಧಿ ವಿನಾಯಿತಿ ಸಂದರ್ಭದಲ್ಲಿ ಯಾವುದೇ ಬಡ್ಡಿಯ ಮೇಲೆ ಬಡ್ಡಿ ಅಥವಾ ದಂಡ ಶುಲ್ಕವನ್ನು ವಿಧಿಸಲಾಗದು ಎಂದು ನ್ಯಾಯಾಲಯ ಸೂಚಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವರ್ಷದ ಮಾರ್ಚ್ ೨೭ರಂದು ಮಾರ್ಚ್ ೧ರಿಂದ ಮೇ ೩೧ರ ವರೆಗೆ ಸಾಲ ಕಂತುಗಳ ಪಾವತಿಗೆ ಸಮಯ ವಿನಾಯಿತಿ ಪ್ರಕಟಿಸಿತ್ತು.

ಆ ಬಳಿಕ ಈ ಅವಧಿಯನ್ನು ಮತ್ತೆ ಮೂರು ತಿಂಗಳ ಕಾಲ ಅಂದರೆ ಆಗಸ್ಟ್ ೩೧ರ ವರೆಗೆ ವಿಸ್ತರಿಸಿತ್ತು.