ಸಾಲ ಪಡೆದವರಷ್ಟೇ ಜಾಮೀನುದಾರರೂ ಜವಾಬ್ದಾರರು

ಕೋಲಾರ,ಜು.೩೦: ಸಾಲ ಪಡೆದವರು ಮರುಪಾವತಿಯಲ್ಲಿ ವಿಳಂಬ ಮಾಡಿದರೆ ಅವರ ಸಾಲಕ್ಕೆ ಜಾಮೀನು ಹಾಕಿದವರೂ ಹೊಣೆಗಾರರಾಗುವುದರಿಂದ ಅವರಿಗೂ ಬೇರೆಲ್ಲೂ ಸಾಲಸೌಲಭ್ಯ ಸಿಗುವುದಿಲ್ಲ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಸಿದರು.
ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಬ್ಯಾಂಕಿನ ಸಿಬ್ಬಂದಿ ಸಭೆಯಲ್ಲಿ ಬ್ಯಾಂಕಿನ ಸಾಲ ವಸೂಲಾತಿ,ಸಾಲ ವಿತರಣೆ,ಠೇವಣಿ ಸಂಗ್ರಹದ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿ, ಸಾಲ ಪಡೆಯುವಾಗ ಸಾಲಗಾರರ ಜತೆಗೆ ಜಾಮೀನುದಾರರ ಆಧಾರ್ ಲಿಂಕ್ ಸಹಾ ಆಗುವುದರಿಂದ ಸಾಲಗಾರ ಸಮರ್ಪಕ ಮರುಪಾವತಿಯಲ್ಲಿ ವಿಫಲನಾದರೆ ಜಾಮೀನುರಾನ (ಸಿಭಿಲ್ ಮಾಕ್ರ್ಸ್) ಸಾಲಮರುಪಾವತಿಯ ವೈಯಕ್ತಿಕ ವ್ಯಕ್ತಿಗತ ವರದಿಯಲ್ಲೂ ಹಿನ್ನಡೆಯಾಗುವುದರಿಂದ ಆತನಿಗೂ ಸಾಲ ಸಿಗುವುದಿಲ್ಲ ಎಂದರು.
ಸಾಲಕ್ಕೆ ಜಾಮೀನು ಹಾಕುವಾರ ಎಚ್ಚರವಹಿಸಿ, ಸಾಲಗಾರನ ಮರುಪಾವತಿಯ ಬದ್ದತೆ ಗಮನಿಸಿ ಸಹಿಹಾಕಬೇಕು ಇಲ್ಲವಾದಲ್ಲಿ ಕಷ್ಟಕ್ಕೆ ಸಿಲುಕಿಹಾಕಿಕೊಳ್ಳುತ್ತೀರಿ ಎಂದು ಜಾಮೀನುದಾರರನ್ನು ಎಚ್ಚರಿಸಿದರು.
ಕೃಷಿಯೇತರ ಸಾಲ ಪಡೆದು ಸಮರ್ಪಕ ಮರುಪಾವತಿ ಮಾಡದವರ ವಿರುದ್ದ ಮುಲಾಜಿಲ್ಲದೇ ಕ್ರಮವಹಿಸಿ ಎಂದು ಸೂಚಿಸಿದ ಅವರು, ಸಾಲಗಾರನಿಗೆ ಜಾಮೀನು ಹಾಕಿರುವವರಿಗೂ ನೊಟೀಸ್ ಕಳುಹಿಸಿ, ಅವರ ಆಸ್ತಿ ಮುಟ್ಟುಗೋಲಿಗೆ ಮೂದಾದರೆ ಸಾಲಗಾರನೂ ದಾರಿಗೆ ಬರುತ್ತಾನೆ ಎಂದರು.
ಬ್ಯಾಂಕಿನ ಸಿಬ್ಬಂದಿ ಕೇವಲ ಸಂಬಳ ಪಡೆಯಲು ಕೆಲಸ ಮಾಡುತ್ತಿದ್ದಿರಿಯೇ ಎಂದು ಖಾರವಾಗಿ ಪ್ರಶ್ನಿಸಿದ ಅವರು, ನಿಮ್ಮ ಕುಟುಂಬಕ್ಕೆ ಅನ್ನ ನೀಡುತ್ತಿರುವ ಬ್ಯಾಂಕ್ ಕೆಲಸದಲ್ಲಿ ಬದ್ದತೆ ಇರಲಿ, ಜವಾಬ್ದಾರಿ ಅರಿತು ಕೆಲಸ ಮಾಡಿ ಎಂದು ತಾಕೀತು ಮಾಡಿದರು.
ಗ್ರಾಹಕರೊಂದಿಗೆ ನಿಮ್ಮ ನಡೆ ಸರಿಯಿದ್ದರೆ ಬ್ಯಾಂಕಿಗೆ ಠೇವಣಿ ಹರಿದು ಬರಲು ಸಾಧ್ಯ ಎಂದ ಅವರು, ಠೇವಣಿ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ಸಾಧಿಸಲು ವಿಫಲವಾದ ಕೆಲವು ಬ್ಯಾಂಕ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಸಾಲ ವಿತರಣೆ, ವಸೂಲಾತಿಯಲ್ಲಿ ಡಿಸಿಸಿ ಬ್ಯಾಂಕ್ ಗೌರವ ಉಳಿಸಿಕೊಂಡಿದೆ, ಬ್ಯಾಂಕಿನ ಈ ಘನತೆಗೆ ಕುತ್ತು ಬಾರದಂತೆ ಕೆಲಸ ಮಾಡುವ ಹೊಣೆಗಾರಿಕೆ ನಿಮ್ಮ ಮೇಲಿದೆ, ಸಿಬ್ಬಂದಿಗೆ ಇದು ನಮ್ಮ ಬ್ಯಾಂಕ್ ಎಂಬ ಆತ್ಮಪೂರ್ವಕ ಭಾವನೆ ಮೂಡಬೇಕು ಎಂದು ಕಿವಿಮಾತು ಹೇಳಿದರು.
ಸಭೆಯಲ್ಲಿ ಬ್ಯಾಂಕಿನ ಎಜಿಎಂಗಳಾದ ಎಂ.ಆರ್.ಶಿವಕುಮಾರ್, ಖಲೀಮುಲ್ಲಾ, ಬೈರೇಗೌಡ,ಹುಸೇನ್ ದೊಡ್ಡಮನಿ, ಅರುಣ್, ಭಾನುಪ್ರಕಾಶ್,ಬೇಬಿ ಶಾಮಿಲಿ, ತಿಮ್ಮಯ್ಯ, ಬಾಲಾಜಿ ಸೇರಿದಂತೆ ಎಲ್ಲಾ ಸಿಬ್ಬಂದಿ ಹಾಜರಿದ್ದರು.